Wednesday, December 27, 2006

ಅಪ್ಪನ ನೆನಪು

("ಫಾದರ್ಸ್ ಡೇ" ಸಂದರ್ಭದಲ್ಲಿ ನನ್ನ ಅಪ್ಪನನ್ನು ನೆನೆಯುತ್ತಾ ಈ ಕವನ. ದುರದೃಷ್ಟವಶಾತ್ ಅವರು ಬಹಳ ಬೇಗ ನನ್ನಿಂದ ಭೌತಿಕವಾಗಿ ದೂರವಾದರೂ ಮಾನಸಿಕವಾಗಿ ಇನ್ನೂ ಅಷ್ಟೇ ಹತ್ತಿರವಾಗಿಯೇ ಉಳಿದಿದ್ದಾರೆ).

ನನ್ನ ತೊದಲು ತುಟಿಗಳಿಗೆ ಪ್ರಾರ್ಥಿಸಲು ಕಲಿಸಿದಿರಿ,
ನನ್ನ ತಪ್ಪಡಿಗಳನು ತಿದ್ದುತ್ತ ಜೊತೆಯಲ್ಲೆ ಸಾಗಿದಿರಿ,
ಕೈಹಿಡಿದು ಬರೆಸಿ ಕೈಬರಹವನ್ನು ಚೆಂದಗಾಣಿಸಿದಿರಿ,
ನನ್ನ ಚಿತ್ತಭಿತ್ತಿಯಲಿ ನೂರಾರು ಬಣ್ಣಗಳ ತುಂಬಿದಿರಿ.

ನಾನು ಕಲಿತಷ್ಟೂ ಕಲಿಸುವ ಉತ್ಸಾಹವಿತ್ತು ನಿಮ್ಮಲ್ಲಿ,
ನಿಮ್ಮಿಂದಾಗಿಯೆ ಕಲಿಕೆಯ ಹಂಬಲ ಚಿಗುರಿತ್ತು ನನ್ನಲ್ಲಿ.
ನೀವು ಕಲಿಸುವಾಗಲೆಲ್ಲ ಆಗುತ್ತಿತ್ತು ಪಾಠವೂ ಆಟ!
ದಿನಕಳೆದಂತೆ ಹತ್ತಿರವಾಗುತ್ತಿತ್ತು ನಮ್ಮೀ ಒಡನಾಟ.

ಹಂಚಿಕೊಂಡಿರಿ ನನ್ನೊಡನೆ ಸಂತಸದ ಘಳಿಗೆಗಳ
ಮುಚ್ಚಿಟ್ಟಿದ್ದು ಸರಿಯೆ ನಿಮ್ಮ ಯಾತನೆ-ತಳಮಳ?
ವಾಸಿಯಾಗದ ಖಾಯಿಲೆಯಿಂದ ನರಳುತ್ತಿದ್ದರೂ ನೀವು,
ನನ್ನೊಂದು ಸಾಧನೆ ಮರೆಸುತ್ತಿತ್ತು ನಿಮ್ಮೆಲ್ಲ ನೋವು.

ನನ್ನ ಪ್ರಗತಿಯನು ಕಂಡು ಹಿರಿ-ಹಿರಿ ಹಿಗ್ಗಿದ್ದು ನೀವೇ,
ನನಗಿಂತ ಹೆಚ್ಚು ಭವಿಷ್ಯದ ಕನಸು ಕಂಡಿದ್ದೂ ನೀವೇ;
ಬೀಜ ಬಿತ್ತಿ, ನೀರು-ಗೊಬ್ಬರವೆರೆದು ಪೋಷಿಸಿದ ನೀವೇ
ಮರವಾಗುವ ತನಕ ಕಾಯದೇ ಹೋದದ್ದು ನ್ಯಾಯವೇ?

ಇಂದು, ನಾನು ಅಪ್ಪ ಆಗುತ್ತಿರುವ ಸಮಯದಲ್ಲಿ,
ಬರಿಯ ನಿಮ್ಮ ನೆನಪೇ ತುಂಬಿದೆ ನನ್ನ ಮನದಲ್ಲಿ.
ಏಕಿರಬೇಕು ನೀವು ಎಲ್ಲೋ ದೂರದಲ್ಲಿ ದೇವರ ಬಳಿ?
ಬಂದುಬಿಡಿ ಅಪ್ಪ, ನಮ್ಮ ಕಂದನ ರೂಪ ತಾಳಿ!

ಕೆಲವು ಹನಿಗವನಗಳು - 21 ಡಿಸೆಂಬರ್ 2006

ಭೌತಶಾಸ್ತ್ರದ ನಿಯಮವಾಯಿತು ಸುಳ್ಳು
************************************
ಭೌತಶಾಸ್ತ್ರದ ನಿಯಮವೊಂದು ಹೇಳುತ್ತದೆ
ಹತ್ತಿರ ಬಂದಷ್ಟೂ ವಸ್ತುಗಳ ನಡುವೆ ಆಕರ್ಷಣೆ ಹೆಚ್ಚಾಗುತ್ತದೆ.
ಕನ್ನಡಿಗರ ವಿಷಯದಲ್ಲಿ ಇದು ಸುಳ್ಳು ಬಿಡಿ,
ಕರುನಾಡಿಗೆ ಹತ್ತಿರವಾದಷ್ಟೂ ಕನ್ನಡ ಪ್ರೇಮ ಕಡಿಮೆಯಾಗುತ್ತದೆ!

ತುಂಬಲಾರದ ನಷ್ಟ!
************************************
ಬದುಕಿದ್ದಾಗ ಪರಸ್ಪರ ಎರಡು ಮಾತನಾಡಲೂ ಕಷ್ಟ;
ಆದರೆ ಮಡಿದ ಕೂಡಲೇ ಅದು ತುಂಬಲಾರದ ನಷ್ಟ!
ಇದು ಎಂಥ ಲೋಕವಯ್ಯ? ಅಂದ ಬೆನಕಯ್ಯ.

ಪ್ರಜೆಗಳು-ಪ್ರಭುಗಳು
************************************
ಐದು ವರ್ಷಕ್ಕೊಮ್ಮೆ, ಚುನಾವಣೆಯೆಂಬ ನಾಟಕದಲ್ಲಿ ಮಾತ್ರ,
ನಮ್ಮ ನಾಯಕರಿಗೆ ಮತದಾರರ ಕೈ-ಕಾಲು ಹಿಡಿಯುವ ಪಾತ್ರ.
ಚುನಾವಣೆಯಲ್ಲಿ ಗೆದ್ದ ಮೇಲೆ ನೋಡಬೇಕು ಇವರ ಅವತಾರ;
ವರ್ಷ ಪೂರ್ತಿ ಕೈ-ಕಾಲು ಹಿಡಿಯಬೇಕು ಬಡಪಾಯಿ ಮತದಾರ!

Sunday, September 10, 2006

ಇದು ಎಂತಹ ಅದ್ಭುತ!

ಇಲ್ಲಿಯೇ ಹತ್ತಿಪ್ಪತ್ತು ವರ್ಷಗಳಿಂದ ಇದ್ದರೂ,
ಹಲವಾರು ಕನ್ನಡ ಚಿತ್ರಗಳಲ್ಲಿ ನಟಿಸಿದ್ದರೂ,
ಕಷ್ಟಪಟ್ಟು ಕನ್ನಡ ಉಲಿಯುವ ನಮ್ಮೀ ಬೆಡಗಿ;
ಪಕ್ಕದೂರಿಂದ ಕರೆಬಂದ ಕೂಡಲೇ ಶ್ರಮವಹಿಸಿ
ಆ ಭಾಷೆ ಕಲಿತು, ಸೊಗಸಾಗಿ ನುಡಿಯುವ ಪರಿ
ಎಂತಹ ಅದ್ಭುತವಯ್ಯಾ - ಎಂದ ಬೆನಕಯ್ಯ!

ಆಧುನಿಕ ಯಕ್ಷಪ್ರಶ್ನೆ

"ದಿನದಿನವೂ ಸಾಯುವವರ ಮಧ್ಯೆ ಇದ್ದರೂ
ನಾವು ಅಮರರು ಅನ್ನುವಂತೆ ಬದುಕುವ ನರರು
ದೊಡ್ಡ ಸೋಜಿಗ" ಅಂತಂದರು ವೇದವ್ಯಾಸರು.
"ಅದು ತುಂಬಾ ಹಳೆಯ ಕತೆ ಬಿಡಿ; ವರ್ಷಕ್ಕೊಮ್ಮೆ
ಕೋಟಿಯಂತೆ, ಐದಾರೂ ವರ್ಷ ಹಣ ಹರಿಸಿದರೂ
ಗುಂಡಿಗಳಿಂದ ತುಂಬಿರುವ ನಮ್ಮೂರಿನ ರಸ್ತೆಗಳು
ಇನ್ನೂ ದೊಡ್ಡ ಸೋಜಿಗ" ಎಂದ ಬೆನಕಯ್ಯ!

ಕನ್ನಡ ಪ್ರೇಮ

ಕನ್ನಡವನ್ನು ಕಂಡರೆ ನಮಗೆ ಅಪಾರ ಹೆಮ್ಮೆ,
ಆದರ ಪೂಜ್ಯ ಭಾವನೆ;
ಹಾಗಾಗಿಯೇ ಅದನ್ನು ಬಳಸುವುದೂ ಕಡಿಮೆ,
ಪೂಜಿಸುತ್ತೇವೆ ಸುಮ್ಮನೆ!

ಅಡುಗೆ ಮಾಡುವ ವಿಧಾನ

ಊರಿಗೆ ಹೋಗುವ ಮುನ್ನ ಹೇಳಿಕೊಡುತ್ತಿದ್ದಳು
ಹೆಂಡತಿ ತನ್ನ ಗಂಡನಿಗೆ ಅಡುಗೆ ಮಾಡಲು;
ಹೀಗೆ ಮಾಡಿ, ಇದು ಆಮೇಲೆ, ಅದು ಮೊದಲು...
ಅರ್ಧಕ್ಕೇ ತಡೆದು ಕೇಳಿದ ಗಂಡ ಅವಳನ್ನು,
ಅದೆಲ್ಲ ಬಿಡು ಹೇಗೋ ಮಾಡಿಬಿಡಬಹುದು,
ಹೇಳು, ಯಾವಾಗ ಹಾಕಬೇಕು ಕೂದಲು?!

Saturday, September 09, 2006

ಇಂದಿನ ನಿತ್ಯೋತ್ಸವ : ಕಹಿ ಸತ್ಯೋತ್ಸವ

(ಕವಿ ಶ್ರೀ. ನಿಸಾರ್ ಅಹಮದ್ ಅವರ ಕ್ಷಮೆ ಕೋರಿ)


ಬತ್ತಿ ನಿಂತ ಜೋಗದಲ್ಲಿ, ಸೊರಗಿ ಹರಿವ ತುಂಗೆಯಲ್ಲಿ,
ದಿನ ದಿನವೂ ನಶಿಸುತಿರುವ ಸಹ್ಯಾದ್ರಿಯ ಶಿಖರಗಳಲಿ,
ಚಿತ್ರಪಟಗಳಲ್ಲಿ ಮಾತ್ರ ಕಾಣಸಿಗುವ ಕಾಡುಗಳಲಿ,
ನಿತ್ಯೋತ್ಸವ, ತಾಯೆ ನಿತ್ಯೋತ್ಸವ,
ನಿತ್ಯೋತ್ಸವ, ನಿನಗೆ ನಿತ್ಯೋತ್ಸವ!

ಇತಿಹಾಸವ ದೂರ ತಳ್ಳಿ, ಸ್ವಾಭಿಮಾನಕಿಟ್ಟು ಕೊಳ್ಳಿ,
ಮಾತೃಭಾಷೆಯನ್ನೆ ಮರೆತು, ಅನ್ಯಭಾಷೆಯೆಲ್ಲ ಕಲಿತು,
ಬೀಗುತಿರುವ ಕೋಟಿ ಕೋಟಿ ನಾಡಜನರ 'ಸ್ಪೀಚು'ಗಳಲಿ,
ನಿತ್ಯೋತ್ಸವ, ತಾಯೆ ನಿತ್ಯೋತ್ಸವ,
ನಿತ್ಯೋತ್ಸವ, ನಿನಗೆ ನಿತ್ಯೋತ್ಸವ!

ನಾಡೆ ಹರಿದು-ಹಂಚಿ ಹೋಗಿ ಕನ್ನಡ ಏನಾದರೇನು?
ತಮ್ಮ ಕುರ್ಚಿ ಭದ್ರ ಮಾಡಿ, ಜನರ ಹಣವ ತಿಂದು ತೇಗಿ,
ಕೇಕೆ ಹಾಕಿ ಮೆರೆಯುತಿರುವ ನಾಯಕರ ಭ್ರಷ್ಟತೆಯಲಿ,
ನಿತ್ಯೋತ್ಸವ, ತಾಯೆ ನಿತ್ಯೋತ್ಸವ,
ನಿತ್ಯೋತ್ಸವ, ನಿನಗೆ ನಿತ್ಯೋತ್ಸವ!

ಗುಂಡಿಬಿದ್ದ ರಸ್ತೆಗಳಲಿ, ಬೆಳೆಯಿಲ್ಲದ ಹೊಲಗಳಲ್ಲಿ,
ಐದು ದಶಕ ಕಳೆದ ಮೇಲೂ ಬೆಳಕಿಲ್ಲದ ಹಳ್ಳಿಗಳಲಿ,
ಸರ್ಕಾರದ ಕಡತಗಳಲಿ ಮಾತ್ರ ಸಿಗುವ ಪ್ರಗತಿಯಲ್ಲಿ,
ನಿತ್ಯೋತ್ಸವ, ತಾಯೆ ನಿತ್ಯೋತ್ಸವ,
ನಿತ್ಯೋತ್ಸವ, ನಿನಗೆ ನಿತ್ಯೋತ್ಸವ!

ಗಜಮುಖನೆ ಗಣಪತಿಯೇ ನಿನಗೆ ವಂದನೆ