Monday, March 12, 2007

ಹೊಸ ಶೀಶೆಯಲ್ಲಿ ಹಳೆಯ ಜನಪ್ರಿಯ ಗಾದೆಗಳು!

ಹಳೆಯ ಗಾದೆ: ಮಂಗನ ಕೈಯಲ್ಲಿ ಮಾಣಿಕ್ಯ ಕೊಟ್ಟಂತೆ.
ಹೊಸ ರೂಪ: ಲಾಲೂ ಕೈಯಲ್ಲಿ ಬಿಹಾರ ಕೊಟ್ಟಂತೆ.

ಹಳೆಯ ಗಾದೆ: ದೇವರು ವರ ಕೊಟ್ಟರೂ ಪೂಜಾರಿ ಕೊಡಲಿಲ್ಲ.
ಹೊಸ ರೂಪ: ಮನಮೋಹನ ವರ ಕೊಟ್ಟರೂ ಸೋನಿಯಾ ಕೊಡಲಿಲ್ಲ!

ಹಳೆಯ ಗಾದೆ: ಹುಚ್ಚನ ಮದುವೇಲಿ ಉಂಡೋನೇ ಜಾಣ.
ಹೊಸ ರೂಪ: ಸಮ್ಮಿಶ್ರ ಸರಕಾರದಲ್ಲಿ ಮಂತ್ರಿಪದವಿ ಗಿಟ್ಟಿಸಿದೋನೇ ಜಾಣ.

ಹಳೆಯ ಗಾದೆ: ಮಳ್ಳಿ ಮಳ್ಳಿ, ಮಂಚಕ್ಕೆಷ್ಟು ಕಾಲು ಅಂದ್ರೆ ಮೂರು ಮತ್ತೊಂದು ಅಂದಳಂತೆ.
ಹೊಸ ರೂಪ: ಪುಢಾರಿ ಪುಢಾರಿ, ನಿನ್ನ ಸ್ವಿಸ್ ಬ್ಯಾಂಕಲ್ಲಿರೋ ಹಣ ಎಷ್ಟು ಅಂದ್ರೆ ಮೂರು ಮತ್ತೊಂದು (ಕೋಟಿ) ಅಂದನಂತೆ!

ಹಳೆಯ ಗಾದೆ: ಅಜ್ಜಿಗೆ ಅರಿವೆ ಚಿಂತೆಯಾದರೆ ಮೊಮ್ಮಗಳಿಗೆ ..... ಚಿಂತೆಯಂತೆ.
ಹೊಸ ರೂಪ: ಪ್ರಜೆಗಳಿಗೆ ದೇಶದ ಚಿಂತೆಯಾದರೆ ಪ್ರಭುಗಳಿಗೆ ಕುರ್ಚಿಯ ಚಿಂತೆಯಂತೆ.

ಹಳೆಯ ಗಾದೆ: ಗಾಳಿ ಬಂದಾಗ ತೂರಿಕೋ.
ಹೊಸ ರೂಪ: ಪದವಿ ಇದ್ದಾಗ ಸರಿಯಾಗಿ (ದುಡ್ಡು) ಬಾಚಿಕೋ.

ಹಳೆಯ ಗಾದೆ: ಕೋಣನಿಗೇನು ಗೊತ್ತು ಕಸ್ತೂರೀ ಗಂಧ?
ಹೊಸ ರೂಪ: ನಿಯತ್ತಿರುವವನಿಗೇನು ಗೊತ್ತು ಗಿಂಬಳದ ಗಂಧ?

ಹಳೆಯ ಗಾದೆ: ಮಾತು ಬಲ್ಲವನಿಗೆ ಜಗಳವಿಲ್ಲ.
ಹೊಸ ರೂಪ: ಪಕ್ಷಾಂತರ ಬಲ್ಲವನಿಗೆ ಕುರ್ಚಿಯ ಚಿಂತೆಯಿಲ್ಲ.

ಹಳೆಯ ಗಾದೆ: ಗೋರ್ಕಲ್ಲ ಮೇಲೆ ಮಳೆ ಸುರಿದಂತೆ.
ಹೊಸ ರೂಪ: ಕಪ್ಪು ಹಣಕ್ಕೆ ತೆರಿಗೆ ಹಾಕಿದಂತೆ!

ಹಳೆಯ ಗಾದೆ: ಯುದ್ಧಕಾಲದಲ್ಲಿ ಶಸ್ತ್ರಾಭ್ಯಾಸ ಮಾಡಿದಂತೆ.
ಹೊಸ ರೂಪ: ಚುನಾವಣಾ ಸಮಯದಲ್ಲಿ ಭಾಷಣ ಉರು ಹೊಡೆದಂತೆ.

(ಬರೆದದ್ದು: ೦೩-ಜನವರಿ-೨೦೦೭)

ಹನಿಗವನ: ಎತ್ತಲಾಗದ ಬಿಲ್ಲು

ತ್ರೇತಾಯುಗದಲ್ಲಿ ಸೀತೆಯನ್ನು ವರಿಸಲು
ರಾಮ ಮುರಿದೇಬಿಟ್ಟ ಶಿವನ ಬಿಲ್ಲು;
ದ್ವಾಪರದಲ್ಲಿ ದ್ರೌಪದಿಯನ್ನು ವರಿಸಲು
ಅರ್ಜುನನೂ ಬಳಸಿದನೊಂದು ಬಿಲ್ಲು;
ಅವೆಲ್ಲ ಒಮ್ಮೆ ಮಾತ್ರದ ಕೆಲಸ ಬಿಡಿ
ಈ ಕಲಿಯುಗದಲ್ಲಿ ನಾನು ಪ್ರತಿವಾರವೂ
ಎತ್ತುತ್ತಿದ್ದೇನೆ ನನ್ನವಳ ಷಾಪಿಂಗ್ ಬಿಲ್ಲು!

(ಬರೆದದ್ದು: ೧೦-ಜನವರಿ-೨೦೦೭)

ಆಣೆ ಯಾಕೋ ನಾಕಾಣೆ

ಹುಡುಗಿ ಹೇಳಿದಳು ತನ್ನ ಪ್ರೀತಿಯ ಹುಡುಗನಿಗೆ -
"ಪ್ರಿಯಾ, ನಾ ನಿನ್ನ ಪ್ರೀತಿಸುವೆ ಪ್ರಾಣಕ್ಕಿಂತ ಹೆಚ್ಚು,
ನನ್ನನ್ನು ನಂಬು; ಬೇಕಿದ್ದರೆ ಆ ದೇವರ ಮೇಲಾಣೆ,
ಭೂತಾಯಿ ಮೇಲಾಣೆ. ಇನ್ನೂ ಅನುಮಾನ ಏಕೆ?"
ಆ ಹುಡುಗ ಉಪ್ಪಿ ಅಭಿಮಾನಿ; ಕೇಳಿದ ತಣ್ಣಗೆ -
"ಹುಚ್ಚು ಹುಡುಗಿ ನೀನು; ಪ್ರೀತಿ ಓಕೆ, ಆಣೆ ಯಾಕೆ?"

(ಬರೆದದ್ದು: ೨೯-ಜನವರಿ-೨೦೦೭)

ಬುದ್ಧ ಸ್ವೀಕರಿಸಲೊಪ್ಪದ ಉಡುಗೊರೆ!

ಒಮ್ಮೆ ಗೌತಮ ಬುದ್ಧನ ಬಳಿಗೆ ಅವನನ್ನು ತೀವ್ರವಾಗಿ ದ್ವೇಷಿಸುವ ವ್ಯಕ್ತಿಯೊಬ್ಬ ಬಂದನಂತೆ. ಬುದ್ಧನ ಸುತ್ತ ಅನೇಕ ಶಿಷ್ಯಂದಿರು ನೆರೆದಿದ್ದ ಸಮಯ. ಬಂದಾತ ಬುದ್ಧನೊಡನೆ ಚರ್ಚೆಗಿಳಿಯಲು ಬಯಸಿದ. ಬುದ್ಧ ಆತನ ಕೋರಿಕೆಯನ್ನು ಸಂತೋಷದಿಂದ ಸಮ್ಮತಿಸಿದ. ಪ್ರಾರಂಭದಲ್ಲಿ ನೇರವಾಗಿಯೇ ಸಾಗಿದ ಚರ್ಚೆ ಕ್ರಮೇಣ ಅಡ್ಡದಾರಿ ಹಿಡಿಯಿತಂತೆ. ಚರ್ಚೆಗಿಳಿದ ವ್ಯಕ್ತಿ ಬುದ್ಧನ ಬಗೆಗಿನ ವೈಯಕ್ತಿಕ ದ್ವೇಷವನ್ನು ತನ್ನ ಮಾತುಗಳಲ್ಲಿ ವ್ಯಕ್ತಪಡಿಸಲು ಆರಂಭಿಸಿದ. ಸುಳ್ಳು ಆರೋಪಗಳನ್ನು ಹೊರಿಸಿ ಬುದ್ಧನನ್ನು ನಿಂದಿಸಿದ. ಬುದ್ಧ ಮಾತ್ರ ಸ್ವಲ್ಪವೂ ಬೇಸರಗೊಳ್ಳದೇ ಶಾಂತನಾಗಿಯೇ ಕುಳಿತಿದ್ದ. ಅ ವ್ಯಕ್ತಿ ಕೊನೆಗೆ ಅವಾಚ್ಯ ಶಬ್ದಗಳಿಂದ ಬುದ್ಧನನ್ನು ನಿಂದಿಸಲು ಪ್ರಾರಂಭಿಸಿದ. ಇದನ್ನು ಸಹಿಸಲಾರದ ಬುದ್ಧನ ಶಿಷ್ಯಂದಿರು ಆತನನ್ನು ಬಲವಂತದಿಂದ ಹೊರದಬ್ಬಲು ಪ್ರಯತ್ನಿಸಿದಾಗ, ಬುದ್ಧ ನಸುನಗುತ್ತಲೇ ಅವರನ್ನು ತಡೆದ.

ಸುಮಾರು ಸಮಯ ಬುದ್ಧನನ್ನು ನಿಂದಿಸಿದ ಆ ವ್ಯಕ್ತಿ ಕೊನೆಗೆ ತಾನಾಗಿಯೇ ಹೊರಟು ಹೋದನಂತೆ. ಬುದ್ಧ ಏನೂ ನಡೆದೇ ಇಲ್ಲವೆಂಬಂತೆ ನಗುತ್ತಾ ಕುಳಿತಿದ್ದ. ಆದರೆ ಈ ಘಟನೆಯಿಂದ ಬಹಳವಾಗಿ ನೊಂದ ಆನಂದನೆಂಬ ಆಪ್ತ ಶಿಷ್ಯ ಬುದ್ಧನನ್ನು ಕೇಳಿಯೇಬಿಟ್ಟ - "ಆತ ಸುಳ್ಳು ಆರೋಪಗಳನ್ನು ನಿಮ್ಮ ಮೇಲೆ ಹೊರಿಸಿ, ಅವಾಚ್ಯ ಶಬ್ದಗಳಿಂದ ನಿಮ್ಮನ್ನು ಅವಮಾನಿಸಿದರೂ ನೀವು ಸುಮ್ಮನೇ ಇದ್ದೀರಲ್ಲ, ಇದು ಸರಿಯೇ? ಆತನಿಗೆ ಸರಿಯಾಗಿ ಪ್ರತ್ಯುತ್ತರ ಕೊಡಬಾರದಿತ್ತೇ?".

ನಸುನಕ್ಕ ಬುದ್ಧ ಅಲ್ಲಿಯೇ ಇದ್ದ ಕಲ್ಲೊಂದನ್ನು ಕೊಡುವಂತೆ ಆನಂದನನ್ನು ಕೋರಿದ. ಆನಂದ ಆ ಕಲ್ಲನ್ನೆತ್ತಿ ಕೊಡಲು ಹೋದಾಗ ಬುದ್ಧ ಅದನ್ನು ತೆಗೆದುಕೊಳ್ಳಲು ನಿರಾಕರಿಸಿದ. "ಇದೇನು?" ಎಂಬಂತೆ ಆನಂದ ಯೋಚಿಸುತ್ತಾ ನಿಂತಾಗ ಬುದ್ಧ ಕೇಳಿದ - "ನೀನು ನನಗೆ ಕೊಡಲೆಂದು ಕಲ್ಲೊಂದನ್ನು ತಂದೆ. ಆದರೆ ನಾನದನ್ನು ತೆಗೆದುಕೊಳ್ಳಲಿಲ್ಲ. ಈಗ ಆ ಕಲ್ಲು ಯಾರ ಬಳಿಯಲ್ಲಿದೆ?". "ನನ್ನ ಹತ್ತಿರ" ಹೇಳಿದ ಆನಂದ. "ನೀನು ಕೊಡಲು ಬಂದ ಮಾತ್ರಕ್ಕೆ ಆ ವಸ್ತು ನನ್ನ ಬಳಿಸೇರಿತು ಎಂದು ಹೇಳಲಾಗುವುದಿಲ್ಲ! ನೀನು ಕೊಟ್ಟದ್ದನ್ನು ನಾನು ನಿರಾಕರಿಸಿದರೆ ಆ ವಸ್ತು ನಿನ್ನ ಬಳಿಯೇ ಉಳಿಯುತ್ತದೆ. ಹಾಗೆಯೇ ಆ ವ್ಯಕ್ತಿ ಕೊಡಲು ಬಂದ ಬಯ್ಗುಳಗಳನ್ನೂ ನಾನು ಸ್ವೀಕರಿಸಲಿಲ್ಲ. ಹಾಗಾಗಿ ಅವು ಆತನ ಬಳಿಯೇ ಉಳಿದಿವೆ! ಅದಕ್ಕೆ ಬದಲಾಗಿ ನಾನೂ ಪ್ರತಿಕ್ರಿಯಿಸಲು ಆರಂಭಿಸಿದ್ದಲ್ಲಿ ಆ ಬಯ್ಗುಳಗಳು ನನ್ನ ಮನಸ್ಸಿನಾಳಕ್ಕಿಳಿದು ನನ್ನ ಶಾಂತಿಯನ್ನೂ ಕದಡುತಿತ್ತೇ ವಿನಃ ಆತನಿಗೆ ಬುದ್ಧಿವಾದ ಹೇಳಿದಂತೆ ಆಗುತ್ತಿರಲಿಲ್ಲ. ಆತ ನನ್ನ ಶಾಂತಿಗೆ ಭಂಗವನ್ನುಂಟು ಮಾಡಲು ಪ್ರಯತ್ನಿಸಿದ. ಆದರೆ ನಾನದನ್ನು ನಿರಾಕರಿಸಿದೆ!" ಎಂದ ಬುದ್ಧ. "ನಮ್ಮ ಮನಸ್ಸಿನ ಶಾಂತಿ ನಮ್ಮನ್ನು ಅವಲಂಬಿಸಿರಬೇಕೇ ಹೊರತು ಹೊರಗಿನ ಪ್ರಚೋದನೆಯನ್ನಲ್ಲ" ಎಂದು ಬೋಧಿಸಿದ ಬುದ್ಧ.

(ಬರೆದದ್ದು: ೦೯-ಜನವರಿ-೨೦೦೭)

ಅಜ್ಜ ಎಂದೊಡನೆ...

ಅಜ್ಜ ಎಂದೊಡನೆ - ನರೆಗೂದಲು, ಕುರುಚಲು ಗಡ್ಡ,
ಎಳೆಯ ಕೆನ್ನೆಗುಜ್ಜಿ ತುರಿಸುತ್ತಿದ್ದ ನೆನಪು.
ಒಳಮನೆಯಲ್ಲಿ ಅವರ ಅಗ್ನಿಹೋತ್ರದ ಜ್ವಾಲೆ
ನಡುಮನೆಯಲ್ಲಿ ನನ್ನ ಮುಖದ ಮೇಲೆಲ್ಲ ಕುಣಿದ ನೆನಪು.

ಅಜ್ಜ ಎಂದೊಡನೆ - ತಿಥಿ, ನಕ್ಷತ್ರ, ಸಂವತ್ಸರ, ಸ್ತೋತ್ರ,
ಅಮರಕೋಶದ ಪಾಠಕ್ಕೆಳೆದು ಕೂರಿಸಿದಂತೆ.
ದಾಳಿಂಬೆಯ ಪ್ರತಿ ಕಾಳನ್ನೂ ಎಣಿಸುತ್ತಾ ಬಿಡಿಸಿ,
ಸುತ್ತಲೂ ಕುಳಿತ ಮೊಮ್ಮಕ್ಕಳಿಗೆ ರೇಗಿಸುತ್ತಾ ತಿನಿಸಿದ ನೆನಪು.

ಅಜ್ಜ ಎಂದೊಡನೆ - ಹೂಗಿಡಗಳ ಜತೆ ಮಾತಾಡುತ್ತಾ
ಹೂಬಿಡಿಸಿ ತಂದು, ಮತ್ತಷ್ಟು ಶ್ರದ್ಧೆಯಿಂದ
ದೇವರ ಮೇಲಿರಿಸಿ ಧನ್ಯತೆಯ ನಗು ನಕ್ಕ ನೆನಪು.
ಬಾಯ್ತುಂಬ ಎಲೆಗವಳ, ಮೊಗದಿ ತೃಪ್ತಿಯ ಸ್ಥಾಯೀಭಾವ.

ಅಜ್ಜ ಎಂದೊಡನೆ - ಕೈಚೀಲ, ಪುಸ್ತಕ ತುಂಬಿದ ಗೂಡು,
ರಥಸಪ್ತಮಿಯ "ಅಂಗಡಿಹಬ್ಬ"ದ ನೆನಪು!
ದೀಪಾವಳಿಯ ಗೋಪೂಜೆಯಂದು ಹಸುಗಳ ಕೋಡಿಗೆ
ಉರಿಮಂಜು ಬಳಿದು, ಹೂಮುಡಿಸಿ, ಹಿರಿಹಿರಿ ಹಿಗ್ಗಿದ ನೆನಪು.

ಅಜ್ಜ ಎಂದೊಡನೆ - ಉಗಾದಿಯಂದು ಬೆಲ್ಲದಷ್ಟೇ ಬೇವುತಿನಿಸಿ,
ಅದರರ್ಥ ತಿಳಿಸಿ, ಬುದ್ಧಿ ತುಂಬಿದ ನೆನಪು.
ಉಡುಗದ ಶಕ್ತಿ, ನಡುಗದ ಕಾಲುಗಳು, ಗಟ್ಟಿ ಹಲ್ಲುಗಳು;
ದೀಪಾವಳಿಗೆ ಪಟಾಕಿ ಕೊಡಿಸುವಾಗ ಚೌಕಾಸಿ ಮಾಡಿದ ನೆನಪು!

ಅಜ್ಜ ಎಂದೊಡನೆ - ಪದ್ಯವೋ, ಮತ್ತೊಂದೋ ಹಿಡಿದು,
ಚರ್ಚಿಸುತ್ತಾ, ಎಳೆಯ ಮನಸ್ಸನ್ನು ಹುರಿಗೊಳಿಸಿ,
ವಯಸ್ಸನ್ನೂ ಮರೆತು ಜತೆಯಲ್ಲಿ ಮಾತನಾಡಿದ ನೆನಪು.
ಅಜ್ಜನೆಂದರೆ, ಮೊದಲ ಮಳೆ ಬಿದ್ದ ಮಣ್ಣಿನ ಕಂಪಿನಂತಹ ನೆನಪು!

(ಬರೆದದ್ದು: ೦೭-ಜನವರಿ-೨೦೦೭)