Thursday, January 25, 2007

ಮುಲ್ಲಾ ಕಥೆ: ಕೆಲವೊಮ್ಮೆ ಪೆದ್ದನಂತೆ ನಟಿಸುವುದೇ ಲಾಭದಾಯಕ!

ಆ ಊರಿನ ಎಲ್ಲರ ಬಾಯಲ್ಲೂ ಮುಲ್ಲಾ ನಸ್ರುದ್ದೀನ್ ಮಾತೇ. ಮುಲ್ಲಾ ಆ ಊರಿನಲ್ಲಿ ಭಿಕ್ಷೆ ಬೇಡಲು ಹೋದ ಕಡೆಯಲ್ಲೆಲ್ಲ, ಯಾರೇ ಆಗಲಿ ಅವನ ಮುಂದೆ ಒಂದು ದೊಡ್ಡ ಮತ್ತು ಇನ್ನೊಂದು ಚಿಕ್ಕ ನಾಣ್ಯಗಳನ್ನು ಇಟ್ಟರೆ, ಮುಲ್ಲಾ ಚಿಕ್ಕ ನಾಣ್ಯವನ್ನೇ ಆರಿಸಿಕೊಳ್ಳುತ್ತಿದ್ದ. ಆ ಊರಿನಲ್ಲಿ ಚಿಕ್ಕ ನಾಣ್ಯದ ಬೆಲೆ ದೊಡ್ಡ ನಾಣ್ಯಕ್ಕಿಂತ ಕಡಿಮೆ. ಹಾಗಾಗಿ ಮುಲ್ಲಾನ ಈ ಆಯ್ಕೆ ಎಲ್ಲರಿಗೂ ಬಹಳ ತಮಾಶೆಯಾಗಿ ಕಾಣುತ್ತಿತ್ತು. ಜನ ನಾ ಮುಂದು, ತಾ ಮುಂದು ಅನ್ನುವಂತೆ ಮುನ್ನುಗ್ಗಿ ಭಿಕ್ಷೆ ಹಾಕಿ ಮಜ ತೆಗೆದುಕೊಳ್ಳುತ್ತಿದ್ದರು.

ದಿನವೂ ಹೀಗೆ ಜನರ ಅಪಹಾಸ್ಯಕ್ಕೆ ಗುರಿಯಾಗುತ್ತಿದ್ದ ಮುಲ್ಲಾನ ಬಗ್ಗೆ ಅಯ್ಯೋ ಎನಿಸಿ ಒಂದು ದಿನ ಗೆಳೆಯನೊಬ್ಬ ಮುಲ್ಲಾನನ್ನು ಕೇಳಿಯೇಬಿಟ್ಟ: "ಮುಲ್ಲಾ, ನೀನೇನು ಮಾಡುತ್ತಿದ್ದೀಯಾ ಅನ್ನುವ ಅರಿವೇ ಇಲ್ಲವಲ್ಲ. ಜನರು ನಿನ್ನ ಮುಂದೆ ಎರಡು ನಾಣ್ಯಗಳನ್ನು ಇಟ್ಟಾಗ ದೊಡ್ಡದನ್ನು ಆರಿಸಿಕೋ. ಬೇಗ ಹೆಚ್ಚು ಹಣ ಗಳಿಸಬಹುದು ಮತ್ತು ಜನರು ನಿನ್ನನ್ನು ನೋಡಿ ನಗುವುದಿಲ್ಲ".

ಮುಲ್ಲಾ ನಸ್ರುದ್ದೀನ್ ಹೇಳಿದ, "ಗೆಳೆಯಾ, ನೀನು ಹೇಳುವುದು ನಿಜ. ಆದರೆ ನಾನೇನಾದರೂ ಹಾಗೆ ಮಾಡಿದಲ್ಲಿ, ನಾಳೆಯಿಂದ ಜನರಿಗೆ ನನನ್ನು ಪೆದ್ದ ಅಂತ ಹಾಸ್ಯ ಮಾಡಿ ನಗುವ ಅವಕಾಶ ತಪ್ಪಿ ಹೋಗುತ್ತದೆ. ಆಗವರು ನನಗೆ ದುಡ್ಡು ಕೊಡುವುದನ್ನೇ ನಿಲ್ಲಿಸಬಹುದು. ಬರುವ ಹಣವೂ ನಿಂತು ಹೋದರೆ ಆಗೇನು ಮಾಡಲಿ? ನನಗೆ ಎಲ್ಲವೂ ಗೊತ್ತಿದ್ದೇ ಹೀಗೆ ಮಾಡುತ್ತಾ ಇದ್ದೀನಿ. ನಿಜಕ್ಕೂ ಪೆದ್ದನಾಗುತ್ತಿರುವುದು ನಾನಲ್ಲ, ಪದೇ ಪದೇ ಬಂದು ಹಣ ಹಾಕಿ ಹೋಗುತ್ತಾರಲ್ಲಾ ಅವರು!".

ಸುಮ್ನೆ ನಗೋಕೆ: ಹಾಲಿವುಡ್ ಸಿನೆಮಾಗಳ ಕನ್ನಡ ಅವತರಣಿಕೆಗಳು

ಮೊನ್ನೆ, ಒಬ್ಬರಿಂದೊಬ್ಬರಿಗೆ ಬರುವ "ಸರಪಳಿ ವಿ-ಪತ್ರ"ವೊಂದು ಬಂತು ("ಫಾರ್ವರ್ಡ್ ಈ-ಮೈಲ್" ಇಲ್ಲವೇ, ಅದಕ್ಕೆ ನಾನು ಇಟ್ಟಿರುವ ಹೆಸರು). ಸಾಮಾನ್ಯವಾಗಿ ಈ ರೀತಿಯ ಪತ್ರಗಳ ಮೂಲ ಹುಡುಕೋದು ಅಸಾಧ್ಯ ಬಿಡಿ. ಅದರಲ್ಲಿ ಇದ್ದ ವಿಚಾರ: "ಹಾಲಿವುಡ್ ಸಿನೆಮಾಗಳನ್ನು ಕನ್ನಡದಲ್ಲಿ ತೆಗೆದರೆ, ಅವುಗಳ ಹೆಸರುಗಳು ಹೇಗಿರಬಹುದು?" ಅಂತ! ಸುಮ್ನೆ ನಕ್ಕು ಮರೆಯೋದಕ್ಕೆ ಒಳ್ಳೆಯ ವಿಷಯ ಅನ್ನಿಸಿತು. ಅದರಲ್ಲಿ ಕೆಲವನ್ನು ನಿಮ್ಮ ಜತೆ ಹಂಚಿಕೊಳ್ಳುತ್ತಿದ್ದೀನಿ. ಇಲ್ಲಿರುವ ಎಲ್ಲ ಹೆಸರುಗಳೂ ಯಥಾವತ್ ಅನುವಾದ ಅಲ್ಲ; ಕನ್ನಡದ ಸೊಗಡಿಗೆ ತಕ್ಕಂತೆ ಹೆಸರಿಡಲಾಗಿದೆ ಅನ್ನೋದು ಗಮನಾರ್ಹ. ಯಾರೇ ಬರೆದಿರಲಿ, ಮೆಚ್ಚಲೇಬೇಕು.

ಹಾಲಿವುಡ್ ಸಿನೆಮಾ--->ಕನ್ನಡ ಅವತರಣಿಕೆ
--------------------------------------------------------
Pirates Of The Caribbean -->ಕಾರವಾರದ ಸಮುದ್ರ ಕಳ್ಳರು
Big Trouble In Little China--> ಚಿಕ್ಕಪೇಟೆಯಲ್ಲಿ ದೊಡ್ಡ ಕಿರಿಕ್ಕು
Devil's Advocate -->ಭೂತಯ್ಯನ ವಕೀಲ
American Pie--> ಮೈಸೂರು ಪಾಕ್
Die Another Day--> ಇನ್ನೊಂದು ದಿನ ಸಾಯಿ
Sleepless In Seattle -->ಕೊಳ್ಳೇಗಾಲದಲ್ಲಿ ನಿದ್ದೆ ಇಲ್ಲವಾದಾಗ
Gods Must Be Crazy -->ದೇವರಿಗೆ ತಲೆ ಕೆಟ್ಟಿರಬೇಕು
Mission Impossible -->ಆಗದಿರೋ ಕೆಲಸ
Once Upon A Time In Mexico--> ಮಂಡ್ಯದಲ್ಲಿ ಒಂದು ದಿನ...

ಈ ದೇಹ ಮತ್ತು ಇಂದ್ರಿಯಗಳು ತಂತಿವಾದ್ಯವಿದ್ದಂತೆ

ದೊಂದು ಸರಳ, ಸುಂದರ ಕಥೆ. ಆದರೆ ಅಷ್ಟೇ ಅರ್ಥವುಳ್ಳದ್ದು ಕೂಡ. ಇದು ಸಿದ್ಧಾರ್ಥ ಗೌತಮ ಬದ್ಧನಾಗಲು ಕಾರಣವಾದ ಘಟನೆ ಅಂತ ಕೆಲವು ಮೂಲಗಳಲ್ಲಿ ಹೇಳಿದ್ದರೆ, ಇನ್ನು ಕೆಲವೆಡೆ ಗೌತಮ ಬುದ್ಧ ತನ್ನ ಶಿಷ್ಯಂದಿರಿಗೆ ಉಪದೇಶ ನೀಡಲು ಬಳಸಿದ ಕಥೆ ಅಂತ ಹೇಳಿದೆ. ಯಾವುದು ಸರಿ ಅನ್ನುವ ಚರ್ಚೆ ನಮಗೇಕೆ ಅಲ್ಲವೇ? ಏಕೆಂದರೆ ಎರಡು ವಾದಗಳಿಗೂ ಖಚಿತ ಪುರಾವೆಗಳಿಲ್ಲ. ಹಾಗೆ ನೋಡಿದರೆ ಬುದ್ಧನ ಕಾಲದ ಬಗೆಗೇ ಇನ್ನೂ ಇತಿಹಾಸಕಾರರು ಚರ್ಚೆ ಮಾಡುತ್ತಾ ಇದ್ದಾರೆ. ಸಾಕು, ನಿನ್ನ ಮಾತೇ ಬಹಳ ಆಯಿತು, ಕಥೆ ಮುಂದುವರೆಸು ಅನ್ನುತ್ತೀರಾ? ಹೌದು, ನನಗೂ ಹಾಗೇ ಅನ್ನಿಸಿತು! ಬನ್ನಿ ಕಥೆಯತ್ತ ಗಮನ ಹರಿಸೋಣ.

ರಾಜಕುಮಾರ ಸಿದ್ಧಾರ್ಥ ಅರಮನೆಯಿಂದ ಹೊರಬಂದವನು, ಸುಮಾರು ಆರು ವರ್ಷಗಳ ಕಾಲ ಹಗಲೂ ರಾತ್ರಿ ದೇಹವನ್ನು ಅತ್ಯಂತ ಕಠಿಣವಾಗಿ ದಂಡಿಸಿ, ಇಂದ್ರಿಯಗಳನ್ನು ಸಂಪೂರ್ಣ ಹತೋಟಿಯಲ್ಲಿಟ್ಟುಕೊಂಡು, ಸತ್ಯದ ಸಾಕ್ಷಾತ್ಕಾರಕ್ಕಾಗಿ ಪ್ರಯತ್ನಿಸಿದ. ಏನೇ ಪ್ರಯತ್ನ ಮಾಡಿದರೂ, ದಿನೇ ದಿನೇ ಅವನ ದೇಹ, ಮನಸ್ಸುಗಳು ಶಿಥಿಲವಾಗುತ್ತಾ ಹೋದವೇ ಹೊರತು, ಅವನು ಹುಡುಕಾಡುತ್ತಿದ್ದ ಸತ್ಯ ಮಾತ್ರ ಇನ್ನೂ ದಕ್ಕಿರಲಿಲ್ಲ. ಕೊನೆಗೊಂದು ದಿನ ಸಿದ್ಧಾರ್ಥನ ದೇಹ ನಿಶ್ಯಕ್ತಿಯಿಂದ ಕುಸಿದು ಹೋಯಿತು. ಆತನ ಸಾಧನೆಯನ್ನು ಗಮನಿಸುತ್ತಿದ್ದ ಸುಜಾತ ಎಂಬಾಕೆ, ಇದನ್ನು ನೋಡಿ ತಡೆಯಲಾರದೆ, ಆಡಿನ ಹಾಲನ್ನು ಕೊಟ್ಟು ಅವನನ್ನು ಬದುಕಿಸಿದಳು. ಸ್ವಲ್ಪ ದಿನಗಳ ಕಾಲ ಒಳ್ಳೆಯ ಆಹಾರವನ್ನು ನೀಡಿ, ದೇಹದಲ್ಲಿ ಸ್ವಲ್ಪ ಕಸುವು ಬರುವಂತೆ ಮಾಡಿದಳು. ಸುಧಾರಿಸಿಕೊಂಡ ಸಿದ್ಧಾರ್ಥ ಚಿಂತಿಸುತ್ತಾ ಕುಳಿತ: "ನಾನೆಲ್ಲಿ ಎಡವಿದೆ? ನನಗೇಕೆ ಪರಮ ಸತ್ಯ ದಕ್ಕುತ್ತಿಲ್ಲ?".

ಚಿಂತಾಕ್ರಾಂತನಾದ ಸಿದ್ಧಾರ್ಥ ಎಲ್ಲೆಂದರಲ್ಲಿ ಸುಮ್ಮನೆ ಅಲೆದಾಡಿದ. ಒಂದು ದಿನ ಹೀಗೆಯೇ ತಿರುಗಾಡುತ್ತಿದ್ದಾಗ ಕುತೂಹಲಕಾರಿ ಘಟನೆಯೊಂದು ಕಣ್ಣಿಗೆ ಬಿತ್ತು. ಅದನ್ನೇ ಗಮನಿಸುತ್ತಾ ನಿಂತ. ಅದೇನೆಂದರೆ, ವ್ಯಕ್ತಿಯೊಬ್ಬ ಚಿಕ್ಕ ಹುಡುಗನಿಗೆ ತಂತಿವಾದ್ಯವೊಂದನ್ನು (ವೀಣೆ, ತಂಬೂರಿ ತರಹದ ಯಾವುದೋ ಒಂದು ವಾದ್ಯ) ಬಾರಿಸುವುದನ್ನು ಹೇಳಿಕೊಡುತ್ತಿದ್ದ. ಪಾಠ ಆರಂಭಿಸುವ ಮೊದಲು ಆ ವ್ಯಕ್ತಿ ಬಾಲಕನಿಗೆ ಹೇಳಿದ: "ನೋಡು ಮಗೂ, ತಂತಿವಾದ್ಯದಲ್ಲಿ ಸ್ವರ ಚೆನ್ನಾಗಿ ಹೊರಡಬೇಕೆಂದರೆ ಮೊದಲು ವಾದ್ಯವನ್ನು ಸರಿಯಾಗಿ ಶೃತಿಗೊಳಿಸಬೇಕು. ಇದು ಬಹಳ ಮುಖ್ಯ. ಎಲ್ಲಿ ನೋಡೋಣ, ಶೃತಿ ಹಿಡಿ; ತಂತಿಯನ್ನು ಬಿಗಿಮಾಡು". ಹುಡುಗ ತಂತಿಯನ್ನು ಎಳೆದು ಬಿಗಿಮಾಡಿದ. ತಂತಿ ಮೀಟಿದಾಗ ಸ್ವರ ಬಹಳ ಕೀರಲಾಗಿ ಹೊರಟಿತು. ಆಗ ಆ ವ್ಯಕ್ತಿ "ನೋಡು, ಹೀಗೆ ತಂತಿಯನ್ನು ಬಹಳ ಬಿಗಿ ಮಾಡಿದರೆ ಸ್ವರ ಕೀರಲಾಗುತ್ತದೆ. ಸ್ವಲ್ಪ ಸಡಿಲ ಮಾಡಿ ನೋಡು" ಎಂದು ಸಲಹೆ ನೀಡಿದ. ಸರಿ, ಬಾಲಕ ಈ ಬಾರಿ ತಂತಿಯನ್ನು ಸಡಿಲಗೊಳಿಸಿದ. ಸಡಿಲವಾದದ್ದು ಹೆಚ್ಚಾಯಿತೇನೋ, ಸ್ವರ ಬಹಳ ಮಂದವಾಗಿ ಹೊರಟಿತು. ಆಗ ಆ ವ್ಯಕ್ತಿ ತಂತಿವಾದ್ಯವನ್ನು ತಾನೇ ತೆಗೆದುಕೊಂಡು, ಬಹಳ ಹೊತ್ತು ಪ್ರಯತ್ನಿಸಿ ಶೃತಿಮಾಡಿದ. ಸ್ವರ ಹದವಾಗಿ, ಕಿವಿಗಿಂಪಾಗಿ ಹೊರಟಿತು.

ಗ ಆ ವ್ಯಕ್ತಿ ಹುಡುಗನನ್ನು ಕುರಿತು, "ಈ ಶೃತಿ ಹಿಡಿಯುವುದೇ ಮೊದಲ ಮತ್ತು ಬಹು ಮುಖ್ಯ ಪಾಠ. ತಂತಿಯನ್ನು ಬಹಳ ಬಿಗಿಗೊಳಿಸಿದಲ್ಲಿ ಸ್ವರ ಕೀರಲಾಗುತ್ತದೆ. ಅದೇ ಅತಿ ಸಡಿಲಗೊಳಿಸಿದರೆ, ಸ್ವರ ಮಂದವಾಗುತ್ತದೆ. ಎರಡೂ ಕೂಡ ಆಗಬಾರದು. ಇವೆರಡರ ಮಧ್ಯೆ, ಸೂಕ್ತವಾದ ಹದದಲ್ಲಿ ತಂತಿಯನ್ನು ಬಿಗಿ ಮಾಡಬೇಕು. ಆಗ ಮಾತ್ರ ತಂತಿವಾದ್ಯದ ಸ್ವರ ಕೇಳಲು ಇಂಪಾಗಿರುತ್ತದೆ" ಎಂದು ಹೇಳಿದ. ಇದನ್ನೇ ಗಮನಿಸುತ್ತಾ ನಿಂತಿದ್ದ ಸಿದ್ಧಾರ್ಥನಿಗೆ, ತಾನು ಇಷ್ಟು ದಿನ ಮಾಡುತ್ತಿದ್ದ ತಪ್ಪು ನಿಚ್ಚಳವಾಗಿ ಹೊಳೆದಂತಾಯಿತು. "ಹೌದು, ಈ ದೇಹ, ಮನಸ್ಸು ಮತ್ತು ಇಂದ್ರಿಯಗಳೂ ಒಂದು ತಂತಿವಾದ್ಯದಂತೆ. ಅಗತ್ಯಕ್ಕಿಂತ ಹೆಚ್ಚು ಬಿಗಿ ಮಾಡಿದರೂ, ಅಥವಾ ಸಡಿಲ ಬಿಟ್ಟರೂ, ಬದುಕಿನಲ್ಲಿ ಯಾವುದೇ ಸಾಧನೆ ಸಾಧ್ಯವಿಲ್ಲ. ಅಯ್ಯೋ! ಇಷ್ಟು ವರ್ಷ ನಾನೆಂತಹ ತಪ್ಪು ಮಾಡಿದೆ. ಅಗತ್ಯಕ್ಕಿಂತ ಹೆಚ್ಚು ದೇಹದಂಡನೆ ಮಾಡಿದೆ. ಅದಕ್ಕೇ ನನಗೆ ಸತ್ಯ ದಕ್ಕಿಲ್ಲ" ಎಂದು ಯೋಚಿಸಿದ ಸಿದ್ಧಾರ್ಥ. ಮುಂದಿನ ದಾರಿ ಸ್ಪಷ್ಟವಾಯಿತು. ಮನಸ್ಸು ಹಗುರಾಯಿತು. ಸಿದ್ಧಾರ್ಥ ಬುದ್ಧನಾದ!

ಜ್ಞಾನೋದಯವಾದ ನಂತರವೂ ಗೌತಮ ಬುದ್ಧ ಈ ವಿಚಾರವನ್ನು ಮರೆಯಲಿಲ್ಲ. "ಈ ದೇಹ, ಮನಸ್ಸು, ಇಂದ್ರಿಯಗಳು ತಂತಿವಾದ್ಯದಂತೆ. ಹದವರಿತು ಬಿಗಿ ಮಾಡುವುದೇ ಸಾಧನೆಯ ಹಿಂದಿನ ಗುಟ್ಟು" ಎಂಬ ಸೂತ್ರವನ್ನು "ಮಧ್ಯಮ ಮಾರ್ಗ" ಎನ್ನುವ ಹೆಸರಿನಲ್ಲಿ ಬೋಧಿಸಿದ.

Friday, January 05, 2007

ಸಂಸ್ಕೃತ ಸುಭಾಷಿತಗಳು - ಭಾಗ ೧

ಸರಸ್ವತಿಯೇ, ನಿನ್ನ ಬಳಿ ವಿದ್ಯೆಯೆಂಬ ಅಪರೂಪದ ಭಂಡಾರವೊಂದಿದೆ.
ಬೇರೆಲ್ಲ ಸಂಪತ್ತುಗಳೂ ಹಂಚಿಕೊಂಡಷ್ಟೂ ಕ್ಷೀಣಿಸುತ್ತವೆ.
ಆದರೆ (ನಿನ್ನ ಬಳಿಯಿರುವ) ವಿದ್ಯೆಯೆಂಬ ಸಂಪತ್ತು ಮಾತ್ರ
ಹಂಚಿಕೊಂಡಷ್ಟೂ ವೃದ್ಧಿಸುತ್ತದೆ ಮತ್ತು ಗೋಪ್ಯವಾಗಿಟ್ಟಷ್ಟೂ ಕ್ಷೀಣಿಸುತ್ತದೆ!
- ಸಂಸ್ಕೃತ ಸುಭಾಷಿತ


ಕಾದ ಕಾವಲಿಯ ಮೇಲೆ ಬಿದ್ದ ನೀರ ಹನಿಯೊಂದು ಆವಿಯಾಗಿ ತನ್ನ ಸ್ವರೂಪವನ್ನೇ ಕಳೆದುಕೊಳ್ಳುತ್ತದೆ.
ಕಮಲದೆಲೆಯ ಮೇಲೆ ಬಿದ್ದ ಅದೇ ನೀರ ಹನಿಯು ಸೂರ್ಯನ ಬೆಳಕಿನಲ್ಲಿ ಮುತ್ತಿನಂತೆ ಕಂಗೊಳಿಸುತ್ತದೆ.
ಸ್ವಾತಿ ನಕ್ಷತ್ರದಲ್ಲಿ ಕಪ್ಪೆಚಿಪ್ಪನ್ನು ಪ್ರವೇಶಿಸಿದ ಅದೇ ನೀರ ಹನಿಯು ಅನರ್ಘ್ಯವಾದ ಮುತ್ತೇ ಆಗುತ್ತದೆ.
ಹೀಗೆ ಉತ್ತಮ, ಮಧ್ಯಮ ಮತ್ತು ಅಧಮವೆಂಬ ಮೂರು ಗುಣಗಳೂ ಸಹವಾಸದಿಂದ ಉಂಟಾಗುತ್ತವೆ!
- ಭರ್ತೃಹರಿಯ ನೀತಿಶತಕ


ಕಾಗೆ ಕಪ್ಪು. ಕೋಗಿಲೆ ಕೂಡಾ ಕಪ್ಪು. ಹಾಗಾದರೆ ಕಾಗೆ-ಕೋಗಿಲೆಗಳ ನಡುವಣ ವ್ಯತ್ಯಾಸ ತಿಳಿಯುವುದು ಹೇಗೆ?
ಬಹಳ ಸುಲಭ; ವಸಂತಮಾಸ ಬಂದೊಡನೆ ಕಾಗೆ ಕಾಗೆಯೇ, ಕೋಗಿಲೆ ಕೋಗಿಲೆಯೇ!
(ವಸಂತಮಾಸದಲ್ಲಿ ಮಾವು ಚಿಗುರುವುದರಿಂದ ಕೋಗಿಲೆ ಇಂಪಾದ ದನಿಯಲ್ಲಿ ಹಾಡುತ್ತದೆ. ಕಾಗೆಗದು ಅಸಾಧ್ಯ ಎಂಬರ್ಥದಲ್ಲಿ)
- ಸಂಸ್ಕೃತ ಸುಭಾಷಿತ


ಲಕ್ಷ್ಮಣ, ಲಂಕೆಯು ಸುವರ್ಣಮಯ ರಾಜ್ಯವೇ ಆದರೂ ಅದು ನನ್ನನ್ನು ಆಕರ್ಷಿಸುತ್ತಿಲ್ಲ.
(ಏಕೆಂದರೆ) ತಾಯಿ ಮತ್ತು ತಾಯ್ನಾಡು ಸ್ವರ್ಗಕ್ಕಿಂತಲೂ ಕೂಡಾ ಮಿಗಿಲಾದುವು!
- ವಾಲ್ಮೀಕಿ ರಾಮಾಯಣ (ರಾಮನು ರಾವಣನನ್ನು ಸಂಹರಿಸಿದ ಬಳಿಕ ಲಕ್ಷ್ಮಣನಿಗೆ ಹೇಳುವ ಮಾತು)


ಹೇಗೆ ಹಾಲು, ಮೊಸರುಗಳಿಗಿಂತ ತಡವಾಗಿ ಹುಟ್ಟಿದರೂ ತುಪ್ಪವು ಹಾಲು, ಮೊಸರುಗಳಿಗಿಂತ ಶ್ರೇಷ್ಠ ಎನಿಸಿಕೊಳ್ಳುವುದೋ,
ಹಾಗೆಯೇ ಹಿರಿತನವೆನ್ನುವುದು ಉತ್ತಮ ಗುಣಗಳಿಂದಾಗಿ ಲಭ್ಯವಾಗುವುದೇ ಹೊರತು ಕೇವಲ ವಯಸ್ಸಿನಿಂದಲ್ಲ.
- ಸಂಸ್ಕೃತ ಸುಭಾಷಿತ

ನುಡಿಮುತ್ತುಗಳು - ಸ್ವಾಮಿ ವಿವೇಕಾನಂದ - ಭಾಗ ೧

(ಸ್ವಾಮಿ ವಿವೇಕಾನಂದರ ಆಯ್ದ ಕೆಲವು ನುಡಿಮುತ್ತುಗಳ ಕನ್ನಡ ಅನುವಾದ ಇಲ್ಲಿದೆ. ಈ ರೀತಿಯ ನುಡಿಮುತ್ತುಗಳನ್ನು ದಿನವೂ ಸಂಪದದಲ್ಲಿ ಬರೆಯುತ್ತಿರುತ್ತೇನೆ. ಆಸಕ್ತಿಯಿದ್ದಲ್ಲಿ ಈ ಕೊಂಡಿ ನೋಡಿ: http://www.sampada.net/quotes/1261)

ನಮ್ಮಲ್ಲಿ ನಾವು ವಿಶ್ವಾಸ ಕಳೆದುಕೊಳ್ಳದಿರುವುದು ಮತ್ತು ನಮ್ಮನ್ನು ನಾವು ದ್ವೇಷಿಸದಿರುವುದೇ ನಮ್ಮ ಮೊದಲ ಕರ್ತವ್ಯ. ಮೊದಲು ನಮ್ಮ ಬಗ್ಗೆ ನಮಗೆ ನಂಬಿಕೆಯಿದ್ದಲ್ಲಿ ಮಾತ್ರ ಭಗವಂತನಲ್ಲಿ ನಂಬಿಕೆಯಿಡಲು ಸಾಧ್ಯ. ತನ್ನನ್ನೇ ನಂಬದವನು ಭಗವಂತನನ್ನು ಹೇಗೆ ತಾನೇ ನಂಬಲು ಸಾಧ್ಯ?!- ಸ್ವಾಮಿ ವಿವೇಕಾನಂದ

ಒಂದು ಆದರ್ಶವನ್ನು, ಗುರಿಯನ್ನು ಕೈಗೆತ್ತಿಕೊಳ್ಳಿ. ಕೇವಲ ಆ ಗುರಿಯ ಬಗ್ಗೆ ಮಾತ್ರ ಯೋಚಿಸಿ, ಚಿಂತಿಸಿ. ನಿಮ್ಮ ಬದುಕನ್ನೇ ಅದಕ್ಕಾಗಿ ಮುಡಿಪಾಗಿಡಿ. ಆ ಗುರಿಯು ನಿಮ್ಮ ಬುದ್ಧಿ, ಮನಸ್ಸು, ಇಂದ್ರಿಯಗಳು, ನರ-ನಾಡಿಗಳನ್ನೆಲ್ಲ ವ್ಯಾಪಿಸಲಿ. ಬೇರೆಲ್ಲ ಆಲೋಚನೆಗಳನ್ನು ಬದಿಗಿಡಿ. ಇದೇ ಯಶಸ್ಸಿನ ಏಕಮಾತ್ರ ಸೂತ್ರ!- ಸ್ವಾಮಿ ವಿವೇಕಾನಂದ

ಆಧ್ಯಾತ್ಮಿಕ ಮತ್ತು ಧಾರ್ಮಿಕ ಪ್ರಗತಿಯ ಮೊದಲ ಗುರುತು ಸದಾ ಹಸನ್ಮುಖಿಯಾಗಿರುವುದು!- ಸ್ವಾಮಿ ವಿವೇಕಾನಂದ

ಈ ಜಗತ್ತೆನ್ನುವುದು ನಮ್ಮನ್ನು ನಾವು ಗಟ್ಟಿಗೊಳಸಲೆಂದೇ ಇರುವ ವ್ಯಾಯಾಮಶಾಲೆ.- ಸ್ವಾಮಿ ವಿವೇಕಾನಂದ

ಜಗತ್ತಿನ ಪರಮೋಚ್ಚ ಧರ್ಮವೆಂದರೆ ನಮ್ಮ ಮೂಲಸ್ವರೂಪದಲ್ಲಿ, ಅಂತಃಸ್ಸತ್ವದಲ್ಲಿ ನಂಬಿಕೆಯಿಡುವುದು.- ಸ್ವಾಮಿ ವಿವೇಕಾನಂದ

ಪ್ರತಿಯೊಬ್ಬ ಮಾನವನಲ್ಲೂ ಸುಪ್ತವಾಗಿರುವ ದೈವೀ ಶಕ್ತಿಯನ್ನು ಪ್ರಕಟಗೊಳಿಸಿ, ಪ್ರಕಾಶಿಸುವಂತೆ ಮಾಡುವುದೇ ನಿಜವಾದ ಧರ್ಮ!- ಸ್ವಾಮಿ ವಿವೇಕಾನಂದ

ಕರ್ನಾಟಕದ ಸುಂದರ ಚಿತ್ರಗಳುಳ್ಳ ಒಂದು "ಸ್ಕ್ರೀನ್ ಸೇವರ್"

ಇತ್ತೀಚೆಗೆ "ದಟ್ಸ್‌ಕನ್ನಡ"ದಲ್ಲಿ ಕರ್ನಾಟಕದ ಹಲವು ಸುಂದರ ತಾಣಗಳ ಚಿತ್ರಗಳುಳ್ಳ ಒಂದು "ಸ್ಕ್ರೀನ್ ಸೇವರ್" ನೋಡಿದೆ. ಚೆನ್ನಾಗಿದೆ ಅಂತ ನನಗನ್ನಿಸಿತು. ಇನ್ನೂ ಯಾರಿಗಾದರೂ ಉಪಯೋಗವಾದೀತು ಅಂತ ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ.

ಅದರ ಕೊಂಡಿ ಇಲ್ಲಿದೆ //http://thatskannada.oneindia.in/screensaver/karnataka.exe

ಸೂಚನೆ: ಇದು ".exe" ಫೈಲ್ ಆದ್ದರಿಂದ ಒಮ್ಮೆ ಸರಿಯಾಗಿ ನೋಡಿ ಆಮೇಲೆ ಡೌನ್‌ಲೋಡ್ ಮಾಡಿಕೊಳ್ಳಿ. ಆಕಸ್ಮಾತ್ ಇದರ ಸ್ಥಳ ಬದಲಾಗಿದ್ದು ಇನ್ನೇನಾದರೂ ".exe" ಇದ್ದಲ್ಲಿ ಕಷ್ಟ!