Friday, January 05, 2007
ಗೃಹಲಕ್ಷ್ಮಿಗೆ
ಎಲ್ಲರ ಭವಿಷ್ಯದ ಹೊಂಗನಸ ತುಂಬಿ ನಿನ್ನ ಕಣ್ಣಲ್ಲಿ,
ವಿಶ್ರಾಂತಿಯ ಹಂಗೂ ಇಲ್ಲದೆ ನೀ ಸತತ ಶ್ರಮಿಸುತ್ತಿರಲು
ಕರೆದು ಸುಮ್ಮನಾಗಲೇ ಬರಿಯ "ಹೆಂಡತಿ"ಯೆಂದು ನಿನ್ನ?
ಇಲ್ಲ, ನಿನಗೊಪ್ಪುವ ಹೆಸರು "ಗೃಹಲಕ್ಷ್ಮಿ" ಚಿನ್ನ!
ಹೊರಗಿನುದ್ಯೋಗಗಳಲ್ಲಿ ನಮಗುಂಟು ನೂರೆಂಟು ರಜೆ,
ಮನೆಗೆಲಸದಲ್ಲಿ ನೀ ಹಾಕಿದರೆ ರಜೆ, ಎಲ್ಲರಿಗದು ಸಜೆ!
ಎಲ್ಲರ ಯಶಸ್ಸಿನ ಹಿಂದೆ ಕಂಡೂ ಕಾಣದಂತೆ ನೀನಿರಲು
ಕರೆದು ಸುಮ್ಮನಾಗಲೇ ಬರಿಯ "ಹೆಂಡತಿ"ಯೆಂದು ನಿನ್ನ?
ಇಲ್ಲ, ನಿನಗೊಪ್ಪುವ ಹೆಸರು "ಗೃಹಲಕ್ಷ್ಮಿ" ಚಿನ್ನ!
ಬೆನ್ನೆಲುಬಾಗಿ ನಿಂತು ಏಳುಬೀಳುಗಳಲ್ಲಿ, ಕಾಳಜಿಯ ತೋರಿ,
ಮೆಚ್ಚುಗೆಯ ಮಾತು ಬಾರದಿದ್ದರೂ ಸಹಿಸಿ, ನಸುನಗೆಯ ಬೀರಿ,
ಮರೆತೆಲ್ಲ ಹತಾಶೆಗಳ, ಮತ್ತೊಂದು ನಾಳೆಗೆ ಸಿದ್ಧವಾಗುತ್ತಿರಲು
ಕರೆದು ಸುಮ್ಮನಾಗಲೇ ಬರಿಯ "ಹೆಂಡತಿ"ಯೆಂದು ನಿನ್ನ?
ಇಲ್ಲ, ನಿನಗೊಪ್ಪುವ ಹೆಸರು "ಗೃಹಲಕ್ಷ್ಮಿ" ಚಿನ್ನ!
ಗಂಡನದೋ, ಮಕ್ಕಳದೋ ಸುಂದರ ಭವಿಷ್ಯಕ್ಕೆ ಪಣತೊಟ್ಟು,
ನಿನ್ನ ಭವಿಷ್ಯವನು, ಆಸೆ-ಆಕಾಂಕ್ಷೆಗಳನು ಸಂಪೂರ್ಣ ಬದಿಗಿಟ್ಟು,
ವನಸುಮದ ಕಲ್ಪನೆಯ ಸಾಕಾರವೆಂಬಂತೆ ನೀ ಕಂಪ ಸೂಸಿರಲು
ಕರೆದು ಸುಮ್ಮನಾಗಲೇ ಬರಿಯ "ಹೆಂಡತಿ"ಯೆಂದು ನಿನ್ನ?
ಇಲ್ಲ, ನಿನಗೊಪ್ಪುವ ಹೆಸರು "ಗೃಹಲಕ್ಷ್ಮಿ" ಚಿನ್ನ!
(ಈ ಕವನ "ವಿಕ್ರಾಂತ ಕರ್ನಾಟಕ"ದ ೧೯ ಜನವರಿ ೨೦೦೭ ರ ಸಂಚಿಕೆಯಲ್ಲಿ ಪ್ರಕಟವಾಗಿದೆ)
ನಿಜಜೀವನದಲ್ಲಿ ಹಾಸ್ಯ: ಭೀಮ-ದುರ್ಯೋಧನರ ಕಾಳಗ ಮತ್ತು ಸಂಕೋಚ್ಯತೆ
ನಮ್ಮಜ್ಜ ಹೈಸ್ಕೂಲು ಉಪಾಧ್ಯಾಯರಾಗಿದ್ದಾಗ ನಡೆದ ಘಟನೆಯಂತೆ ಇದು. ಕನ್ನಡ ಪರೀಕ್ಷೆ. ಪ್ರಶ್ನೆಪತ್ರಿಕೆಯಲ್ಲಿ ಒಂದು ಪ್ರಶ್ನೆ - "ಭೀಮ ದುರ್ಯೋಧನರ ಕಾಳಗವನ್ನು ನಿಮ್ಮದೇ ಆದ ವಾಕ್ಯಗಳಲ್ಲಿ, ಒಂದು ಪುಟಕ್ಕೆ ಮೀರದಂತೆ ವಿವರಿಸಿ". ಬಹುಶಃ ರನ್ನನ "ಗದಾಯುದ್ಧ"ವನ್ನು ಮನಸ್ಸಿನಲ್ಲಿಟ್ಟುಕೊಂಡು ಈ ಪ್ರಶ್ನೆ ಹಾಕಿರಬೇಕು ಅನ್ನಿಸುತ್ತೆ. ಒಬ್ಬ ಭೂಪ ಉತ್ತರ ಬರೆದಿದ್ದು ಹೀಗೆ: "ಭೀಮ ತನ್ನ ಗದೆಯ ತುದಿಯಿಂದ ಮೊದಲು ದುರ್ಯೋಧನನ ಭುಜಕ್ಕೆ ತಿವಿದು, ನಂತರ ಗದೆಯನ್ನು ಸುತ್ತಿಸಿ ಸುತ್ತಿಸಿ ಹೊಡೆದು, ನಂತರ ದುರ್ಯೋಧನನ ಹೊಟ್ಟೆಗೆ ಬಲವಾಗಿ ಹೊಡೆದು, ಆಮೇಲೆ ದುರ್ಯೋಧನನ ತಲೆಯ ಮೇಲೆ ಅಪ್ಪಳಿಸಿ........" ಹೀಗೆ ಇಡಿಯ ಪುಟವನ್ನು ಬೇರೆ ಬೇರೆ ರೀತಿಯ "ತನ್ನದೇ ಆದ ತಿವಿತ, ಹೊಡೆತಗಳ ವಿವರಣೆಯಿಂದ" ತುಂಬಿಸಿ ಕೊನೆಯಲ್ಲಿ ".....ದುರ್ಯೋಧನನು ಪೂರ್ಣ ಸುಸ್ತಾಗಿ ಇನ್ನೇನು ಕೆಳಗೆ ಬೀಳುವಷ್ಟರಲ್ಲಿ ಭೀಮನು ಅವನ ತೊಡೆಗೆ ಗದೆಯಿಂದ ಬಲವಾಗಿ ಹೊಡೆದು ಅವನನ್ನು ಸೋಲಿಸಿದನು" ಅಂತ ಬರೆದಿದ್ದನಂತೆ! ಉತ್ತರ ಪರಿಶೀಲಿಸುತ್ತಿದ್ದ ನಮ್ಮಜ್ಜನಿಗೆ ನಗು ತಡೆಯಲು ಆಗಲೇ ಇಲ್ಲವಂತೆ.
ಎರಡನೆಯದು ನಮ್ಮಪ್ಪ ಉತ್ತರಪತ್ರಿಕೆ ಪರಿಶೀಲಿಸುವಾಗ ಅವರಿಗೆ ಕಂಡುಬಂದದ್ದು (ಸುಮಾರು ಇಪ್ಪತ್ತು ವರ್ಷಗಳ ಹಿಂದಿನ ಮಾತಿದು).ಪ್ರಶ್ನೆ ಏನಪ್ಪ ಅಂದ್ರೆ - "ಸಂಕೋಚ್ಯತೆ(compressibility) ಅಂದರೇನು? ಉದಾಹರಣೆ ಸಹಿತ ವಿವರಿಸಿ". ಭೌತಶಾಸ್ತ್ರದ ಪ್ರಶ್ನೆ.ಒಬ್ಬ ಬರೆದಿದ್ದ ಉತ್ತರ ಹೀಗಿತ್ತಂತೆ (ಉತ್ಪ್ರೇಕ್ಷೆ ಅಲ್ಲವೇ ಅಲ್ಲ, ಲಿಟರಲಿ ಹೀಗೇ ಬರೆದಿದ್ದನಂತೆ): "ನೀವು ಹೊಸದಾಗಿ ಒಂದು ಊರಿಗೆ ಹೋಗುತ್ತೀರ ಅಂತ ಇಟ್ಟುಕೊಳ್ಳಿ. ಕುಡಿಯುವ ನೀರು ಹಿಡಿಯಲು ನಲ್ಲಿಯೊಂದರ ಬಳಿ ಹೋಗಬೇಕಾಗುತ್ತದೆ ಅಂತ ಭಾವಿಸಿ. ನಲ್ಲಿಯ ಬಳಿ ಬಹುತೇಕ ಹೆಣ್ಣುಮಕ್ಕಳೇ ಇದ್ದಾರೆಂದುಕೊಂಡರೆ, ಆಗ ನಿಮಗೆ ಒಂದು ತರಹದ ಸಂಕೋಚ ಆಗುತ್ತಲ್ಲ, ಅದನ್ನೇ ಸಂಕೋಚ್ಯತೆ ಎನ್ನುತ್ತಾರೆ"!!!
ನನಸಾಗುವುದಿಲ್ಲ ಏಕೀ ಕನಸುಗಳು?
ಬದುಕೆಂದರೆ ಶುಭ್ರ, ವಿಶಾಲ, ತಿಳಿನೀಲಿ ಬಾಂದಳದಂತೆ,
ಗರಿಗೆದರಿ ಮನದುಂಬಿ ಹಾರಾಡಬಹುದಾದ ಆಂಗಣದಂತೆ,
ಬದುಕೆಂದರೆ ಅನಂತ, ನಿಗೂಢ, ತಾರೆಗಳ ತೋಟದಂತೆ.
ಏನೆಲ್ಲ ಕನಸುಗಳು ಬಾಲ್ಯದಲ್ಲಿ, ಎಳೆಯ ಮನದಲ್ಲಿ;
ವಿಜ್ಞಾನಿಯಾಗಿ ಹೊಸತೇನನ್ನೋ ಕಂಡುಹಿಡಿದಂತೆ,
ಗಗನಯಾತ್ರಿಯಾಗಿ ತಿಂಗಳನ ಅಂಗಳದಿ ನಡೆದಾಡಿದಂತೆ,
ಹಿಮಕವಿದ ಉನ್ನತ ಗಿರಿ-ಶಿಖರಗಳನ್ನು ಮೆಟ್ಟಿ ನಿಂತಂತೆ!
ಏನೆಲ್ಲ ತುಡಿತಗಳು ಬಾಲ್ಯದಲ್ಲಿ, ಎಳೆಯ ಮನದಲ್ಲಿ;
ಹತ್ತು ಮಂದಿಗೆ ಪಾಠ ಕಲಿಸುವ ಗುರುವು ನಾವಾದಂತೆ,
ಚಿತ್ರಕಾರನಾಗಿ ಹೊಸ ಬಣ್ಣಗಳಲಿ ಜಗವ ತೋಯಿಸಿದಂತೆ,
ವೈದ್ಯನಾಗಿ ಜನರ ಸೇವೆಯಲ್ಲಿಯೇ ಧನ್ಯತೆಯ ಪಡೆದಂತೆ!
ಏನೆಲ್ಲ ಆದರ್ಶಗಳು ಬಾಲ್ಯದಲ್ಲಿ, ಎಳೆಯ ಮನದಲ್ಲಿ;
ನವಭಾರತ ನಿರ್ಮಾಣವೆಂಬ ಯಜ್ಞದಲ್ಲಿ ಭಾಗಿಗಳಾದಂತೆ,
ಗಾಂಧಿ, ಸುಭಾಷರ ಧ್ಯೇಯಗಳಿಗೆ ಮರುಜೀವವಿತ್ತಂತೆ,
ನಮ್ಮ ಸಾಧನೆಯ ಚೆಂಬೆಳಕಲ್ಲಿ ಸಮಾಜವನ್ನು ಬೆಳಗಿದಂತೆ.
ನಾವು ಬೆಳೆದಂತೆ ನಮ್ಮ ಕನಸುಗಳ ರಾಶಿ ಕರಗುವುದು ಏಕೆ?
ಯಾಂತ್ರಿಕ ಬಾಳಬಂಡಿಯೋಟವೇ ಕೇಂದ್ರವಾಗುವುದು ಏಕೆ?
ಇಷ್ಟೆಲ್ಲ ತುಡಿತಗಳು, ಕನಸುಗಳು, ನನಸಾಗುವುದಿಲ್ಲವೇಕೆ?
ನಮ್ಮ ಕನಸುಗಳ ಸ್ಫೂರ್ತಿ ಸೆಲೆಯೇ ಬತ್ತಿ ಹೋಗುವುದೇಕೆ?
ಬೆಳ್ಳಿತೆರೆಯ ಬಂಗಾರದ ಮನುಷ್ಯನಿಗೊಂದು ನುಡಿನಮನ
ಅಣ್ಣಾವ್ರೇ, ಇಂದು ನಮ್ಮೊಂದಿಗಿಲ್ಲ ನೀವು ಎಂದರೆ ನಂಬಲಾಗುತ್ತಿಲ್ಲ
ನಿಮ್ಮ ಪಾತ್ರಗಳ ಗುಂಗಿನಿಂದ ಹೊರಬರಲು ಏಕೋ ಸಾಧ್ಯವಾಗುತ್ತಿಲ್ಲ.
ಬೆಳ್ಳಿತೆರೆಯ "ಬಂಗಾರದ ಮನುಷ್ಯ" ನಿಮಗೆ ಅರ್ಪಣೆ ನನ್ನೀ ಕವನ;
ನೀವು ಕಟ್ಟಿಕೊಟ್ಟ ಬಣ್ಣ-ಬಣ್ಣದ ಕನಸುಗಳಿಗಿದು ನನ್ನ ನುಡಿ ನಮನ.
ಸಾಧು-ಸಂತರಿಗೆ, ಇತಿಹಾಸದ ರಾಜರಿಗೆ ಜೀವ ತುಂಬಿದಿರಿ ನೀವು;
ಕನಕನಾಗಿ ಬಾಗಿಲನು ತೆರೆಯೆಂದು ಬೇಡಿದಾಗ ತಳಮಳಿಸಿದ್ದು ನಾವು.
ಕಾಳಿದಾಸನ "ಮಾಣಿಕ್ಯ ವೀಣೆ"ಯನು ಬಣ್ಣಿಸಲು ಪದಗಳೇ ಸಿಗುತ್ತಿಲ್ಲ;
ರಣಧೀರ, ಕೃಷ್ಣದೇವರಾಯರಂತೂ ಸದಾ ಮನದಲ್ಲೇ ನೆಲಸಿರುವರಲ್ಲ!
ಮರೆಯಲಾದೀತೇ ಮಣ್ಣಿನ ಜೊತೆ ಮಗುವನ್ನೂ ತುಳಿದ ಕುಂಬಾರನನ್ನು?
ಮಯೂರನ ಕತ್ತಿವರಸೆಯನ್ನು, ಅರ್ಜುನ-ಬಭ್ರುವಾಹನರ ಕಾಳಗವನ್ನು?
ಪಾತ್ರದೊಳಗೊಂದಾಗುತ್ತಿದ್ದ ನಿಮ್ಮಭಿನಯದ ಉತ್ತುಂಗ ಆ "ಹರಿಶ್ಚಂದ್ರ",
ಕಿರೀಟವನ್ನಿಟ್ಟು ಅರಸನುಡುಗೆ ತೊಟ್ಟರಂತೂ ಸಾಕ್ಷಾತ್ ಧರೆಗಿಳಿದ ಇಂದ್ರ!
ಕನ್ನಡವೇ ನನ್ನ ಪ್ರಾಣವೆನ್ನುತ್ತಾ ನಾಡು-ನುಡಿಗಳಿಗಾಗಿ ಹೋರಾಡಿದಿರಿ,
ರಾಜಕೀಯಕ್ಕಿಳಿಯದೆಯೆ ಅಭಿಮಾನಿಗಳೆದೆಯೆಂಬ ರಾಜ್ಯವನು ಆಳಿದಿರಿ.
ಶಾಲೆ-ಆಸ್ಪತ್ರೆಗಳನ್ನೇಕೆ ಕಟ್ಟಿಸಲಿಲ್ಲ? ಎಂದು ಕೇಳಲು ಮನಸ್ಸೊಪ್ಪುತ್ತಿಲ್ಲ;
ಸಾಕು ಬಿಡಿ, ತಲೆಮಾರುಗಳೆರಡರಲ್ಲಿ ಕನ್ನಡದ ಕಿಚ್ಚು ಹೊತ್ತಿಸಿದಿರಲ್ಲ.
ಅಣ್ಣಾವ್ರೇ, ಸಾಕೆನ್ನಿಸಿತೇಕೆ "ರಾಜಕುಮಾರ"ನೆಂಬ ಈ ಅಮೋಘ ಪಾತ್ರ?
ಮರೆಯಾದರೇನು ನೀವು, ಮನದಲ್ಲಿ ನಿಮ್ಮ ಪಾತ್ರಗಳದ್ದೇ ನಿತ್ಯಚೈತ್ರ.
ಆ ದೇವರಿಗೂ ನೋಡಬೇಕೆನ್ನಿಸಿತೇನೋ ನಿಮ್ಮನ್ನು ಅವನ ಪಾತ್ರದಲ್ಲಿ!
ಪುನಃ ಬಂದುಬಿಡಿ ಬೇಗ, ತೆರವಾಗಿಹುದು ಸ್ಥಾನ ನಮ್ಮ ಹೃದಯಗಳಲ್ಲಿ.
(ಈ ಕವನ "ಸಂಪದ"ದಲ್ಲಿ ಪ್ರಕಟವಾಗಿದೆ)
Wednesday, December 27, 2006
ಅಪ್ಪನ ನೆನಪು
ನನ್ನ ತೊದಲು ತುಟಿಗಳಿಗೆ ಪ್ರಾರ್ಥಿಸಲು ಕಲಿಸಿದಿರಿ,
ನನ್ನ ತಪ್ಪಡಿಗಳನು ತಿದ್ದುತ್ತ ಜೊತೆಯಲ್ಲೆ ಸಾಗಿದಿರಿ,
ಕೈಹಿಡಿದು ಬರೆಸಿ ಕೈಬರಹವನ್ನು ಚೆಂದಗಾಣಿಸಿದಿರಿ,
ನನ್ನ ಚಿತ್ತಭಿತ್ತಿಯಲಿ ನೂರಾರು ಬಣ್ಣಗಳ ತುಂಬಿದಿರಿ.
ನಾನು ಕಲಿತಷ್ಟೂ ಕಲಿಸುವ ಉತ್ಸಾಹವಿತ್ತು ನಿಮ್ಮಲ್ಲಿ,
ನಿಮ್ಮಿಂದಾಗಿಯೆ ಕಲಿಕೆಯ ಹಂಬಲ ಚಿಗುರಿತ್ತು ನನ್ನಲ್ಲಿ.
ನೀವು ಕಲಿಸುವಾಗಲೆಲ್ಲ ಆಗುತ್ತಿತ್ತು ಪಾಠವೂ ಆಟ!
ದಿನಕಳೆದಂತೆ ಹತ್ತಿರವಾಗುತ್ತಿತ್ತು ನಮ್ಮೀ ಒಡನಾಟ.
ಹಂಚಿಕೊಂಡಿರಿ ನನ್ನೊಡನೆ ಸಂತಸದ ಘಳಿಗೆಗಳ
ಮುಚ್ಚಿಟ್ಟಿದ್ದು ಸರಿಯೆ ನಿಮ್ಮ ಯಾತನೆ-ತಳಮಳ?
ವಾಸಿಯಾಗದ ಖಾಯಿಲೆಯಿಂದ ನರಳುತ್ತಿದ್ದರೂ ನೀವು,
ನನ್ನೊಂದು ಸಾಧನೆ ಮರೆಸುತ್ತಿತ್ತು ನಿಮ್ಮೆಲ್ಲ ನೋವು.
ನನ್ನ ಪ್ರಗತಿಯನು ಕಂಡು ಹಿರಿ-ಹಿರಿ ಹಿಗ್ಗಿದ್ದು ನೀವೇ,
ನನಗಿಂತ ಹೆಚ್ಚು ಭವಿಷ್ಯದ ಕನಸು ಕಂಡಿದ್ದೂ ನೀವೇ;
ಬೀಜ ಬಿತ್ತಿ, ನೀರು-ಗೊಬ್ಬರವೆರೆದು ಪೋಷಿಸಿದ ನೀವೇ
ಮರವಾಗುವ ತನಕ ಕಾಯದೇ ಹೋದದ್ದು ನ್ಯಾಯವೇ?
ಇಂದು, ನಾನು ಅಪ್ಪ ಆಗುತ್ತಿರುವ ಸಮಯದಲ್ಲಿ,
ಬರಿಯ ನಿಮ್ಮ ನೆನಪೇ ತುಂಬಿದೆ ನನ್ನ ಮನದಲ್ಲಿ.
ಏಕಿರಬೇಕು ನೀವು ಎಲ್ಲೋ ದೂರದಲ್ಲಿ ದೇವರ ಬಳಿ?
ಬಂದುಬಿಡಿ ಅಪ್ಪ, ನಮ್ಮ ಕಂದನ ರೂಪ ತಾಳಿ!
ಕೆಲವು ಹನಿಗವನಗಳು - 21 ಡಿಸೆಂಬರ್ 2006
************************************
ಭೌತಶಾಸ್ತ್ರದ ನಿಯಮವೊಂದು ಹೇಳುತ್ತದೆ
ಹತ್ತಿರ ಬಂದಷ್ಟೂ ವಸ್ತುಗಳ ನಡುವೆ ಆಕರ್ಷಣೆ ಹೆಚ್ಚಾಗುತ್ತದೆ.
ಕನ್ನಡಿಗರ ವಿಷಯದಲ್ಲಿ ಇದು ಸುಳ್ಳು ಬಿಡಿ,
ಕರುನಾಡಿಗೆ ಹತ್ತಿರವಾದಷ್ಟೂ ಕನ್ನಡ ಪ್ರೇಮ ಕಡಿಮೆಯಾಗುತ್ತದೆ!
ತುಂಬಲಾರದ ನಷ್ಟ!
************************************
ಬದುಕಿದ್ದಾಗ ಪರಸ್ಪರ ಎರಡು ಮಾತನಾಡಲೂ ಕಷ್ಟ;
ಆದರೆ ಮಡಿದ ಕೂಡಲೇ ಅದು ತುಂಬಲಾರದ ನಷ್ಟ!
ಇದು ಎಂಥ ಲೋಕವಯ್ಯ? ಅಂದ ಬೆನಕಯ್ಯ.
ಪ್ರಜೆಗಳು-ಪ್ರಭುಗಳು
************************************
ಐದು ವರ್ಷಕ್ಕೊಮ್ಮೆ, ಚುನಾವಣೆಯೆಂಬ ನಾಟಕದಲ್ಲಿ ಮಾತ್ರ,
ನಮ್ಮ ನಾಯಕರಿಗೆ ಮತದಾರರ ಕೈ-ಕಾಲು ಹಿಡಿಯುವ ಪಾತ್ರ.
ಚುನಾವಣೆಯಲ್ಲಿ ಗೆದ್ದ ಮೇಲೆ ನೋಡಬೇಕು ಇವರ ಅವತಾರ;
ವರ್ಷ ಪೂರ್ತಿ ಕೈ-ಕಾಲು ಹಿಡಿಯಬೇಕು ಬಡಪಾಯಿ ಮತದಾರ!