Friday, January 05, 2007

ಶ್ರೀ ಗುರುಭ್ಯೋ ನಮಃ ಹರಿಃ ಓಂ....

ಸೆಪ್ಟೆಂಬರ್ 5 "ಶಿಕ್ಷಕರ ದಿನಾಚರಣೆ" ಅನ್ನೋದು ಎಲ್ಲರಿಗೂ ತಿಳಿದಿರೋ ವಿಷಯ (ಗೊತ್ತಿರಲಿಲ್ಲ ಅಂದರೆ ಇದನ್ನು ಓದುವಾಗ ಗೊತ್ತಾಯಿತಲ್ಲ, ಬಿಡಿ!). ಶಾಲೆ, ಕಾಲೇಜುಗಳಲ್ಲಿ ಕಲಿಯುತ್ತಿದ್ದಾಗ ಎಂತಹ ಮಜಾ ಇರುತ್ತಿತ್ತು ಅಲ್ವಾ? ಗೆಳೆಯ-ಗೆಳತಿಯರು, ಸ್ಕೂಲ್ ಡೇಗಳು, ಪ್ರವಾಸಗಳು, ಹೋಟೆಲ್ಲು-ಸಿನೆಮಾಗಳು, ಇವೆಲ್ಲದರ ಮಧ್ಯೆ ಯಾಕಾದರೂ ಬರುತ್ತವೋ ಅನ್ನುವ ಪರೀಕ್ಷೆಗಳು, ಕೊನೆಗೆ ಅಗಲುವಾಗ ಕಣ್ಣಂಚಿನಲ್ಲಿ ಹೊರಬರಲೋ ಬೇಡವೋ ಎನ್ನುವಂತೆ ಒಂದು ಹನಿ ಕಣ್ಣೀರು, ಆಟೋಗ್ರಾಫ್ ಪುಸ್ತಕಗಳು...ಹೀಗೇ ಪ್ರತಿಯೊಬ್ಬರಿಗೂ ಅವರವರ ವಿದ್ಯಾರ್ಥಿ ಜೀವನದ ಒಂದೊಂದು ನೆನಪಿನ ಪೆಟಾರಿಯೇ ಇರುತ್ತದೆ. ಓದಿದ್ದೆಲ್ಲ ಮುಗಿದು ಜೀವನದ ಓಟದಲ್ಲಿರುವಾಗ, "ವಿದ್ಯಾರ್ಥಿ ಜೀವನ ಸುವರ್ಣ ಜೀವನ" ಅನ್ನುವ ಹೇಳಿಕೆಯನ್ನು ನಾವೆಲ್ಲ ಕನಿಷ್ಠ ಒಂದು ಬಾರಿಯಾದರೂ ನಮಗೆ ನಾವೇ ಹೇಳಿಕೊಂಡಿರುತ್ತೀವಿ. ಇವೆಲ್ಲದರ ಜತೆ ಶಾಲೆ-ಕಾಲೇಜು, ವಿದ್ಯಾರ್ಥಿ ಜೀವನ ಅಂದ ತಕ್ಷಣ ಜ್ಞಾಪಕಕ್ಕೆ ಬರೋದು ನಮ್ಮ ಮೇಷ್ಟ್ರುಗಳು. ಎಲ್ಲರಿಗೂ ಒಬ್ಬರಲ್ಲ ಒಬ್ಬರು "ಫೇವರಿಟ್" ಮೇಷ್ಟ್ರೋ, ಮೇಡಮ್ಮೋ ಇದ್ದೇ ಇರುತ್ತಾರೆ. ಓದುವಾಗ ಕೆಲವೊಮ್ಮೆ ಅವರ ಹತ್ತಿರ ಸಿಕ್ಕಾಪಟ್ಟೆ ಬೈಸಿಕೊಂಡಿದ್ದರೂ (ತಿರುಗಿ ಅವರನ್ನೂ ನಾವು ಬೈದುಕೊಂಡಿದ್ದರೂ!) "ಅಯ್ಯೋ, ನಮ್ಮ ಒಳ್ಳೆಯದಕ್ಕೇ ತಾನೇ ಅವರು ಬಯ್ಯುತ್ತಾ ಇದ್ದಿದ್ದು" ಅಂತ ಈಗ ಅನ್ನಿಸೋದಿಲ್ವ? "ಶಿಕ್ಷಕರ ದಿನ" ಅನ್ನೋ ಈ ಒಂದು ನೆಪದಲ್ಲಿ, ಹತ್ತು ನಿಮಿಷ ತಣ್ಣಗೆ ಕೂತು, ನಮ್ಮ ಮೆಚ್ಚಿನ ಗುರುಗಳನ್ನು ನೆನೆಸಿಕೊಂಡರೆ ಹೇಗಿರುತ್ತೆ ಅಂತ ಯೋಚಿಸಿ. ನನಗೂ ಅದೇ ಅನ್ನಿಸಿದ್ದು. "ನನ್ನ ಜೀವನದಲ್ಲಿ ಈವರೆಗೆ ಅತ್ಯಂತ ಪ್ರಭಾವ ಬೀರಿದ ಗುರುಗಳಲ್ಲಿ ಕೆಲವರನ್ನಾದರೂ ನೆನೆದು ಒಂದು ಲೇಖನ ಬರೆಯುವುದರ ಮೂಲಕ ಅವರಿಗೆ ವಂದನೆ ಸಲ್ಲಿಸಬಾರದು ಏಕೆ? ಅವರಲ್ಲಿ ಯಾರಾದರೂ ಈ ಲೇಖನ ಓದಿದರೆ ಅವರಿಗೆ ಈಗ ಏನನ್ನಿಸಬಹುದು?" ಅಂತ ಯೋಚನೆ ಬಂತು. ಯೋಚನೆ ಬಂದದ್ದೇ ತಡ ಕಾರ್ಯರೂಪಕ್ಕೂ ಇಳಿಸಿಯೇಬಿಟ್ಟೆ. ಇದನ್ನು ಓದುವಾಗ ನಿಮ್ಮ ಗುರುಗಳೂ ಜ್ಞಾಪಕಕ್ಕೆ ಬಂದು, ಮನಸ್ಸು ಗೌರವದಿಂದ ಬಾಗುವಂತಾದರೆ ಅಷ್ಟೇ ಸಾಕು.

ನನ್ನ ಪಾಲಿಗೆ ಮನೆ ನಿಜಕ್ಕೂ ಮೊದಲ ಪಾಠಶಾಲೆಯೇ ಆಗಿತ್ತು. ನಾನು "ಎಲ್.ಕೆ.ಜಿ.-ಯು.ಕೆ.ಜಿ."ಗಳ ಗೋಜಲಿಗೆ ಸಿಕ್ಕಿಕೊಳ್ಳದೆ ನೇರವಾಗಿ ಒಂದನೇ ತರಗತಿಗೆ ಸೇರಿದೆ. ಹಾಗಾಗಿ ಆ ಎರಡು ವರ್ಷಗಳೂ ಮನೆಯೆಂಬ ಪಾಠಶಾಲೆಯಲ್ಲಿ ನಮ್ಮಜ್ಜನೇ ಮೊದಲ ಗುರು. ತಿಥಿ-ಮಾಸ-ನಕ್ಷತ್ರಗಳು, ಸಂವತ್ಸರಗಳು, ಶ್ಲೋಕಗಳು, ಅಮರಕೋಶ ಹೀಗೆ ಎಷ್ಟು ಹೇಳಿಕೊಟ್ಟರೂ ಅಜ್ಜನ ಕಲಿಸುವ ಪಟ್ಟಿ ಮುಗಿಯುತ್ತಿರಲಿಲ್ಲ! ಅಲ್ಲಿಂದ ಪ್ರಾರಂಭವಾದ ಅವರ ಅಧ್ಯಾಪನ ನಾನು 10ನೇ ತರಗತಿಗೆ ಬರುವ ತನಕವೂ ಮುಂದುವರೆಯಿತು. ಶಾಲೆಯಲ್ಲಿ ಕಲಿಯುವ ಮೊದಲೇ "ಶ್ಯಾಮೂ, ಮುಂದೆ ಬೇಕಾಗುತ್ತೆ ಬಾರೋ" ಅಂತ ಎಳೆದು ಕೂರಿಸಿಕೊಂಡು ಅಜ್ಜ ಸಂಸ್ಕೃತ ಹೇಳಿಕೊಟ್ಟದ್ದು ಇನ್ನೂ ನಿನ್ನೆ-ಮೊನ್ನೆಯದೇನೋ ಅನ್ನುವಂತೆ ನೆನಪಿದೆ. ನನಗೆ ಸುಮಾರು 13-14 ವರ್ಷಗಳಾದಾಗ ನಿಧಾನವಾಗಿ ಕಾವ್ಯಪ್ರಪಂಚದ ಹೊಸ್ತಿಲಲ್ಲಿ ನನ್ನನ್ನು ತಂದು ನಿಲ್ಲಿಸಿದ್ದೂ ನಮ್ಮಜ್ಜನೇ. ಲೇಖನ ಕಲೆ, ಕವನದ ಲಯಬದ್ಧತೆ, ಗೇಯತೆ, ಹದವರಿತು ಪ್ರಾಸವನ್ನು ಬಳಸುವ ಬಗೆ...ಇತ್ಯಾದಿ ವಿಷಯಗಳ ಬಗ್ಗೆ ಅವರು ನನಗೆ ಅಂದು ಇತ್ತ ಮಾರ್ಗದರ್ಶನ ಇಂದು ಹೆಚ್ಚು ಹೆಚ್ಚು ಉಪಯೋಗಕ್ಕೆ ಬರುತ್ತಿದೆ!

ಬಾಲ್ಯದಿಂದಲೂ ನನ್ನನ್ನು ಅಕ್ಷರಶಃ ತಿದ್ದಿ-ತೀಡಿ ಬೆಳೆಸಿದ್ದು ನಮ್ಮಪ್ಪ. ಅಪ್ಪ ತಮ್ಮ ವೃತ್ತಿಯ ಬಹುತೇಕ ಭಾಗವನ್ನು ನಮ್ಮೂರಿನ (ನನ್ನೂರು ಚಿಕ್ಕಮಗಳೂರು ಜಿಲ್ಲೆಯ ಬೀರೂರು) ಸರ್ಕಾರೀ ಹೈಸ್ಕೂಲಿನಲ್ಲಿ ಉಪಾಧ್ಯಾಯ ಮತ್ತು ಮುಖ್ಯೋಪಾಧ್ಯಾಯರಾಗಿ ಕಳೆದರು. ಶಿಸ್ತಿನ ಸಿಪಾಯಿಯಾಗಿ, "ಬಿ.ಸಿ.ಡಿ." ಅಂತಲೇ ಚಿರಪರಿಚಿತರಾಗಿದ್ದ ಅಪ್ಪ ಜಿಲ್ಲೆಯಲ್ಲೇ ಹೆಸರುವಾಸಿ ಶಿಕ್ಷಕರಾಗಿದ್ದರು. ನನ್ನ ಕೈಬರಹವನ್ನು ತಿದ್ದುವುದರಿಂದ ಹಿಡಿದು, ಚಿತ್ರ ಬಿಡಿಸುವುದು, ವಿಜ್ಞಾನಕ್ಕೆ ಸಂಬಂಧಿಸಿದ ಪ್ರಯೋಗಗಳನ್ನು ಮಾಡುವುದು, ಪುಸ್ತಕ ಓದುವ ಹುಚ್ಚು... ಹೀಗೆ ನನ್ನ ಬಹುತೇಕ ಚಟುವಟಿಕೆಗಳಿಗೆ ಸ್ಫೂರ್ತಿಯಾಗಿದ್ದವರು ಮತ್ತು ಗುರುವಾಗಿದ್ದವರು ಅಪ್ಪ. ಈಗಲೂ ಅವರನ್ನು ಬರಿಯ ಅಪ್ಪ ಎನ್ನುವುದಕ್ಕಿಂತ ಹೆಚ್ಚಾಗಿ ಒಬ್ಬ "ಗುರು, ಮಾರ್ಗದರ್ಶಿ ಮತ್ತು ಫಿಲೊಸೊಫರ್" ಆಗಿ ನೆನೆಯಲು ಇಷ್ಟಪಡುತ್ತೀನಿ.

ಶಿವಮೊಗ್ಗದ ಡಿ.ವಿ.ಎಸ್.ಜೂನಿಯರ್ ಕಾಲೇಜಿನಲ್ಲಿ ನಮಗೆ ಪಾರ್ಥಸಾರಥಿ ಅನ್ನುವ ಉಪನ್ಯಾಸಕರು ಭೌತಶಾಸ್ತ್ರ(ಫಿಸಿಕ್ಸ್) ತೆಗೆದುಕೊಳ್ಳುತ್ತಿದ್ದರು. ಅದೆಷ್ಟು ಚೆನ್ನಾಗಿ ಪಾಠ ಮಾಡುತ್ತಾ ಇದ್ದರು ಅಂದರೆ ಅವರು ಪಾಠ ಮಾಡುತ್ತಿದ್ದಾರೋ, ಕಥೆ ಹೇಳುತ್ತಿದ್ದಾರೋ ಗೊತ್ತಾಗುತ್ತಿರಲಿಲ್ಲ. "ನೋಡ್ರಯ್ಯ, ಫಿಸಿಕ್ಸ್ ಅಂತಲ್ಲ, ಯಾವುದೇ ವಿಷಯಾನೂ ಓದೋ ಖುಷಿಗಾಗಿ ಓದಬೇಕು. ಎಕ್ಸಾಮ್ಸ್ ದೃಷ್ಟಿಯಿಂದಲ್ಲ" ಅಂತ ಅವರು ಪದೇ ಪದೇ ಹೇಳುತ್ತಿದ್ದರು. ಅದಕ್ಕೇ ಅವರಿಗೆ ಎರಡನೇ ಪಿ.ಯು.ಸಿ.ಗೆ ಪಾಠ ಮಾಡೋದಕ್ಕಿಂತ ಮೊದಲನೇ ಪಿ.ಯು.ಸಿ.ಗೆ "ಸಿಲಬಸ್ ಪೂರ್ತಿ ಮಾಡುವ" ಹಂಗಿಲ್ಲದೆ ಪಾಠ ಮಾಡೋದು ಹೆಚ್ಚು ಪ್ರಿಯವಾಗಿತ್ತು! ನಾವು ಐದಾರು ಜನ ವಿದ್ಯಾರ್ಥಿಗಳು "ಸಿಲಬಸ್"ನಿಂದ ಹೊರಗಿನ ಪಾಠ ಕೇಳಲು ತಯಾರಾಗಿದ್ದು ಅವರಿಗೆ ಅದೆಂಥಾ ಖುಷಿ ಕೊಟ್ಟಿತ್ತು ಅಂದರೆ, ನಮಗಾಗಿ ಪ್ರತಿ ಭಾನುವಾರ 3-4 ಘಂಟೆ ಸುಮ್ಮನೆ ವಿಶೇಷ ತರಗತಿ ತೆಗೆದುಕೊಳ್ಳುತ್ತಿದ್ದರು. ಒಂದು ದಿನ ಅರ್ಧ ಘಂಟೆ ನೀಲ್ ಬೋರ್ ಅನ್ನುವ ವಿಜ್ಞಾನಿಯ ಸಾಧನೆ ಕುರಿತು ಕಥೆ ಹೇಳ್ತಾ ಹೇಳ್ತಾ ಅದೆಷ್ಟು ಚೆನ್ನಾಗಿ ಪಾಠ ಮಾಡಿದ್ರೂ ಅಂದ್ರೆ, ನನಗೆ ಈಗಲೂ ಅದರ ಪ್ರತಿ ಪದವೂ ಜ್ಞಾಪಕದಲ್ಲಿದೆ.

ಇದೇ ಡಿ.ವಿ.ಎಸ್. ಕಾಲೇಜಿನಲ್ಲಿದ್ದಾಗಲೇ ನನಗೆ ದೊರೆತ ಇನ್ನೊಬ್ಬ ನೆನಪಿನಲ್ಲುಳಿಯುವ ಉಪನ್ಯಾಸಕರು ಅಂದರೆ ಎಂ.ಆರ್.ಸೀತಾಲಕ್ಷ್ಮಿ (ಎಂ.ಆರ್.ಎಸ್.). ಇವರು ನಮಗೆ ಗಣಿತ ಪಾಠ ಮಾಡುತ್ತಿದ್ದರು. ಪಾಠ ಮಾಡುವ ಕಲೆ ಅದೆಷ್ಟು ಕರಗತವಾಗಿತ್ತು ಅಂದರೆ, ಅವರು ತರಗತಿಗೆ ಪುಸ್ತಕ ತಂದು ಪಾಠ ಮಾಡಿದ್ದು ನನಗಂತೂ ನೆನಪಿಲ್ಲ. ಎಂ.ಆರ್.ಎಸ್.ಗೆ ಅಧ್ಯಾಪನ ಅನ್ನೋದು ಕೇವಲ ವೃತ್ತಿಯಾಗಿರಲಿಲ್ಲ, ಅದೊಂದು ಪ್ರಾಣಪ್ರಿಯ ಹವ್ಯಾಸ! ಓದುವವರನ್ನು ಕಂಡರೆ ಅದೇನು ಇಷ್ಟ ಅಂತೀರಾ. ಅವರು ವಿದ್ಯಾರ್ಥಿಗಳನ್ನು ಮಾತಾಡಿಸುತ್ತಿದ್ದ ರೀತಿಯೂ ಅಷ್ಟೇ, "ಅಪ್ಪಾ, ಅಣ್ಣ, ಅಣ್ಣಯ್ಯಾ.." ಅಂತಲೇ! ಯಾರಾದರೂ ಓದುವುದರಲ್ಲಿ ಸ್ವಲ್ಪ ಹೆಚ್ಚು ಆಸಕ್ತಿ ತೋರಿಸಿದರಂತೂ, ಆ ಹುಡುಗನನ್ನೋ/ಹುಡುಗಿಯನ್ನೋ ಅವರು ಶಿವಮೊಗ್ಗೆಯ ಹತ್ತಿರದ ತಮ್ಮೂರಾದ ಮತ್ತೂರಿಗೇ ಕರೆದು, ತಮ್ಮ ಮನೆಯಲ್ಲಿ ಹೊತ್ತಿನ ಅರಿವಿಲ್ಲದೆ ಪಾಠ ಮಾಡಿದ ಉದಾಹರಣೆಗಳು ಲೆಕ್ಕವಿಲ್ಲದಷ್ಟು. ಎಮ್.ಆರ್.ಎಸ್. ತಮ್ಮ ತರಗತಿಗಳಲ್ಲಿ ಒಮ್ಮೊಮ್ಮೆ ಪಾಠ ಮಾಡುತ್ತಾ ಮಾಡುತ್ತಾ ಮೈಮರೆತು ಗಾಳಿಯಲ್ಲಿ ಬರೆದು (ಗಾಳಿಯಲ್ಲೇ ಬೋರ್ಡ್ ಇದೆ ಅನ್ನುವ ಭಾವನೆಯಿಂದ!) ವಿವರಿಸುತ್ತಿದ್ದದ್ದೂ, ಅದನ್ನು ಕಂಡು ನಾವೆಲ್ಲ ನಗುತ್ತಿದ್ದದ್ದೂ (ನಗು ಅಪಹಾಸ್ಯಕ್ಕಲ್ಲ) ನೆನಪಿದೆ.

ಎರಡನೇ ಪಿ.ಯು.ಸಿ.ಯಲ್ಲಿ ಓದುತ್ತಿದ್ದಾಗ ಪರಿಚಯವಾದ ಮೇಷ್ಟ್ರು ಬಿ.ಜಿ.ಶ್ರೀನಿವಾಸಮೂರ್ತಿ. ಇವರು ಬೆಂಗಳೂರಿನ ಜಯನಗರ, ಜೆ.ಪಿ.ನಗರ ಬಡಾವಣೆಗಳಲ್ಲಿ ಬಿ.ಜಿ.ಎಸ್. ಅಂತಲೇ ಖ್ಯಾತರಾಗಿದ್ದಾರೆ. ಇವರ ಹತ್ತಿರ ಗಣಿತ ಪಾಠ ಹೇಳಿಸಿಕೊಂಡು ನೂರಕ್ಕೆ ನೂರು ಅಂಕ ಗಳಿಸಿದ ವಿದ್ಯಾರ್ಥಿಗಳು ಅದೆಷ್ಟು ನೂರು ಜನ ಇದ್ದಾರೋ ಗೊತ್ತಿಲ್ಲ. ಅಂದು ಮೊದಲ್ಗೊಂಡ ನಮ್ಮ ಸಂಬಂಧ ಇಂದಿಗೂ ಹಾಗೆಯೇ ಸಾಗಿದೆ. ನಾನು ಬಿ.ಜಿ.ಎಸ್. ಹತ್ತಿರ ನೇರವಾಗಿ ಪಾಠ ಹೇಳಿಸಿಕೊಂಡಿಲ್ಲ. ಶಿವಮೊಗ್ಗೆಯಲ್ಲಿ ಓದುತ್ತಿದ್ದ ನಾನು ಮನೆಪಾಠಕ್ಕೆ (ಟ್ಯೂಶನ್) ಹೋಗುತ್ತಿರಲಿಲ್ಲ. ಹಾಗಾಗಿ ನನಗಿದ್ದ ಕೆಲವೊಂದು ಸಂದೇಹಗಳನ್ನು ಚರ್ಚಿಸೋದಕ್ಕೆ ಅಂತ ನಾನು ಬಿ.ಜಿ.ಎಸ್ ಬಳಿ ಹೋದೆ. ಒಂದು ರೀತಿಯಲ್ಲಿ ನಾನವರಿಗೆ ಬಾದರಾಯಣ ಸಂಬಂಧಿಯಾದರೂ, ಸಂಬಂಧಕ್ಕಿಂತ ಹೆಚ್ಚು "ಓದೋ ಹುಡುಗ" ಅಂತ ಅವರು ನನಗೆ ದಿನವೂ ಅವರ ಮನೆಯಲ್ಲಿ, ತಮ್ಮ ಅವಿಶ್ರಾಂತ ದಿನಚರಿಯ ನಡುವೆ ಕೂಡಾ ನನ್ನ ಜೊತೆ ಒಂದಷ್ಟು ಹೊತ್ತು ಕೂತು ಅನೌಪಚಾರಿಕ ರೀತಿಯಲ್ಲಿ ಪಾಠ ಹೇಳುತ್ತಿದ್ದರು. ಬರಿಯ ಪಾಠ ಅಷ್ಟೇ ಅಲ್ಲ ಜೊತೆಗಿಷ್ಟು ರುಚಿಕಟ್ಟಾದ ಊಟ-ತಿಂಡಿ ಕೂಡಾ! ನನ್ನ ಎರಡನೇ ಪಿ.ಯು. ಮುಗಿದು ಬಿ.ಇ. ಸೇರುವ ಹಂತದಲ್ಲಿ ಯಾವ ವಿಷಯ ಆರಿಸಿಕೊಳ್ಳಲಿ ಅಂತ ಸ್ವಲ್ಪ ಗೊಂದಲವುಂಟಾಗಿತ್ತು. ನನಗೆ ಕೆಮಿಸ್ಟ್ರಿ ತುಂಬಾ ಇಷ್ಟ. ಆದರೆ ಮುಂದೆ ಕೆಲಸದ ದೃಷ್ಟಿಯಿಂದ ಅದು ಅಂತಹ ಸೂಕ್ತ ಅಲ್ಲ ಅಂತ ಮನೆಯವರ ಭಾವನೆ. ನಾನು ಬಿ.ಜಿ.ಎಸ್. ಬಳಿ ಸಲಹೆ ಕೇಳಲು ಹೋದೆ. "ನೋಡಪ್ಪ, ಏನು ಓದಬೇಕು ಅಂತ ಆಸೆಯೋ ಅದನ್ನು ಓದು. ಆಮೇಲೆ ದುಡಿಯುವ ದಾರಿ ಗೊತ್ತಾಗಲಿಲ್ಲ ಅಂದರೆ ನನ್ನ ಹತ್ತಿರ ಬಾ, ತೋರಿಸುತ್ತೀನಿ" ಅಂತ ಹೇಳಿ ಸ್ಥೈರ್ಯ ಮತ್ತು ಉತ್ಸಾಹ ತುಂಬಿದರು! ಇಂತಹ ಗುರುಗಳನ್ನು ತಂಪು ಹೊತ್ತಿನಲ್ಲಿ ನೆನೆಯೋದು ನನ್ನ ಕರ್ತವ್ಯ ಅಂತ ಭಾವಿಸಿದ್ದೀನಿ.

ಪಿ.ಯು. ಮುಗಿದು ಇಂಜಿನಿಯರಿಂಗಿಗೆ ಅಂತ ನಾನು ಮೈಸೂರಿನ ಜಯಚಾಮರಾಜೇಂದ್ರ ಕಾಲೇಜು ಸೇರಿದೆ. ನಮಗೆ ಮೊದಲ ಸೆಮಿಸ್ಟರಿನಲ್ಲಿ "ಇಂಜಿನಿಯರಿಂಗ್ ಮೆಕಾನಿಕ್ಸ್" ತೆಗೆದುಕೊಳ್ಳೊದಕ್ಕೆ ಅಂತ ಬಂದಿದ್ದು ಪಿ.ನಂಜುಂಡಪ್ಪ ಅನ್ನುವ ತರುಣ ಲೆಕ್ಚರರ್. ಮೊದಲ ತರಗತಿಯಲ್ಲೇ ಅವರು "ನಾನು ಅಟೆಂಡೆನ್ಸ್ ಅಂತೆಲ್ಲ ನಿಮ್ಮನ್ನು ಗೋಳುಹುಯ್ಯೋದಿಲ್ಲ. ಯಾರಿಗೆ ಇಷ್ಟವೋ ಅವರು ಕೂತು ಪಾಠ ಕೇಳಿ, ಉಳಿದವರು ನಿರಾಳವಾಗಿ ತೊಂದರೆ ಕೊಡದೆ ಎದ್ದು ಹೋಗಿ. ಆದರೆ ಒಂದು ವಿಷಯ, ನನ್ನ ಪಾಠ ಕೇಳಿದ ಮೇಲೆ ಬಹುಶಃ ಮನೆಯಲ್ಲಿ ಓದುವ ಪ್ರಮೇಯ ಬರಲಾರದು" ಅಂದರು! ಎಲ್ಲರಿಗೂ ತಬ್ಬಿಬ್ಬು. ಆದರೆ ಆ ಮಾತುಗಳು ಕೇವಲ ಸ್ವಪ್ರಶಂಸೆಯಾಗಿರಲಿಲ್ಲ. ಅದಾಗಿ ಮೂರು ತಿಂಗಳಲ್ಲಿ ಪಿ.ಎನ್. ಎಲ್ಲಾ ವಿದ್ಯಾರ್ಥಿಗಳನ್ನೂ ಅದ್ಯಾವ ಪರಿ ಆವರಿಸಿಕೊಂಡರು ಅಂದರೆ, ನಮ್ಮ ಸೆಕ್ಷನ್ ಅಷ್ಟೇ ಅಲ್ಲ ಉಳಿದ ಸೆಕ್ಷನ್ನಿನವರೂ ಬಂದು ಅವರ ತರಗತಿಯಲ್ಲಿ ಕೂರುತ್ತಿದ್ದರು. ಅವರ ತರಗತಿಗಳಲ್ಲಿ ಕೆಲವೊಮ್ಮೆ ಕೂರಲು ಜಾಗ ಸಾಲದೆ ನಿಂತು ಪಾಠ ಕೇಳಿದ್ದೂ ಉಂಟು! ನಾನು ನಿಜವಾಗಿಯೂ "ಇಂಜಿನಿಯರಿಂಗ್ ಮೆಕಾನಿಕ್ಸ್"ನ್ನು ಮನೆಯಲ್ಲಿ ಎರಡನೇ ಬಾರಿ ಓದಲೇ ಇಲ್ಲ.

ನಮ್ಮ ಎರಡನೇ ಸೆಮಿಸ್ಟರಿನಲ್ಲಿ ಪಿ.ಎನ್. ನಮಗೆ ಯಾವುದೇ ತರಗತಿ ತೆಗೆದುಕೊಳ್ಳುತ್ತಿರಲಿಲ್ಲ. ಆದರೆ ಒಂದು ಸಬ್ಜೆಕ್ಟ್ ನಮಗೆ ಕಬ್ಬಿಣದ ಕಡಲೆಯಾಗಿತ್ತು. ಅದನ್ನು ಪಾಠ ಮಾಡುವ ಲೆಕ್ಚರರ್ ಚೂರೂ ಚೆನ್ನಾಗಿ ಮಾಡುತ್ತಿರಲಿಲ್ಲ. ನಮಗೇನೂ ಗೊತ್ತಿಲ್ಲ ಅಂತ ಗೊತ್ತಾಗುವ ಹೊತ್ತಿಗೆ ಕೇವಲ ಒಂದು ತಿಂಗಳಲ್ಲಿ ಫೈನಲ್ ಎಕ್ಸಾಮ್ಸ್ ಇತ್ತು. ಸರಿ, ಡುಂಕಿ ಖಚಿತ ಅಂತ ಎಲ್ಲರೊ ನಿರ್ಧಾರ ಮಾಡಿಯಾಗಿತ್ತು. ನಾವು ಏಳೆಂಟು ಜನ ಸ್ನೇಹಿತರು ಕೊನೆಯ ಪ್ರಯತ್ನವೆಂಬಂತೆ ಪಿ.ಎನ್. ಬಳಿಗೆ ಹೋಗಿ ಎಲ್ಲ ವರದಿ ಒಪ್ಪಿಸಿ ಗೋಣು ಕೆಳಗೆ ಹಾಕಿ ನಿಂತ್ವಿ. "ಮೊದಲೇ ಹೇಳೋಕೆ ಏನಾಗಿತ್ತು? ಎಕ್ಸಾಮ್ ಆದಮೇಲೆ ಕೇಳಿದ್ದಿದ್ದರೆ ಇನ್ನೂ ಚೆನ್ನಾಗಿರುತ್ತಿತ್ತು ಅಲ್ವಾ?" ಅಂತ ಪ್ರೀತಿಯಿಂದಲೇ ಬೈದ ಪಿ.ಎನ್. ಅವತ್ತಿನಿಂದ ಒಂದು ತಿಂಗಳು, ಪ್ರತಿದಿನ (ನೆನಪಿಡಿ, ಇದು ಅವರು ನಿಯಮದ ಪ್ರಕಾರ ಪಾಠ ಮಾಡಬೇಕಾಗಿಲ್ಲದ ವಿಷಯ) ಸಂಜೆ ನಮ್ಮ ತರಗತಿಗಳು ಮುಗಿಯುವ ಸಮಯಕ್ಕೆ ಸರಿಯಾಗಿ ಅವರ ಮನೆಯಿಂದ ಬಂದು, ಆಮೇಲೆ ಎರಡು ಘಂಟೆ ಪಾಠ ಮಾಡುತ್ತಿದ್ದರು. ಪರೀಕ್ಷೆಗಳೆಲ್ಲ ಮುಗಿದ ನಂತರ ಎಕ್ಸಾಮ್ ಚೆನ್ನಾಗಿ ಆಯಿತು ಅಂತ ಹೇಳೋದಕ್ಕೆ ಅವರ ಮನೆಗೆ ನಾವೆಲ್ಲ ಹೋದೆವು. ಸುಮ್ಮನಿರಲಾರದೆ ನಮ್ಮಲ್ಲಿ ಒಬ್ಬ "ಫೀಸ್" ಬಗ್ಗೆ ಕೇಳಿದ ನೋಡಿ; ಪಿ.ಎನ್ ಉಗಿದು ಉಪ್ಪಿನಕಾಯಿ ಹಾಕಿದ್ದು ಇನ್ನೂ ನೆನಪಿದೆ!

ಹೀಗೇ ಹೇಳುತ್ತಾ ಹೋದರೆ ಪಟ್ಟಿ ಬೆಳೆಯುತ್ತಾ ಹೋಗುತ್ತೆ ಬಿಡಿ. ಇನ್ನೂ ನಾಲ್ಕೈದು ಗುರುಗಳ ಬಗೆಗಿನ ನೆನಪುಗಳನ್ನು ಬರೆಯಬೇಕು ಅನ್ನೋ ಆಸೆಯೇನೋ ಇದೆ. ಪ್ರಾಥಮಿಕ ಶಾಲೆಯಲ್ಲಿ ಯಾವಾಗಲೂ ಗುಡ್ ಹಾಕಿ ಉತ್ತೇಜನ ನೀಡುತ್ತಿದ್ದ "ಗುಡ್ ಮಿಸ್", ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯಿನಿಯಾಗಿದ್ದ ಮಾರ್ಗರೆಟ್ ಮಿಸ್, ಹೈಸ್ಕೂಲಿನಲ್ಲಿ ಸಂಸ್ಕೃತ ಹೇಳಿಕೊಟ್ಟ ವಿದ್ವಾನ್.ಎಮ್.ಸುಬ್ರಹ್ಮಣ್ಯ ಭಟ್ಟರು, ಕಾಲೇಜಿನಲ್ಲಿ ಸಂಸ್ಕೃತ ಉಪನ್ಯಾಸಕರಾಗಿದ್ದ ಕಿಟ್ಟಿ ಸರ್, ಇತಿಹಾಸದಂತಹ ವಿಷಯವನ್ನು "ಹೀಗೂ ಪಾಠ ಮಾಡಬಹುದು" ಅಂತ ತೋರಿಸಿ, ಇತಿಹಾಸದ ಬಗ್ಗೆ ಅಪಾರ ಆಸಕ್ತಿ ಚಿಗುರಿಸಿದ ಎಸ್.ವಿ.ಗಂಗಾಧರಪ್ಪನವರು, ಹೈಸ್ಕೂಲಿನಲ್ಲಿ ಮುಖ್ಯೋಪಾಧ್ಯಾಯರಾಗಿ ಬಂದು ಕನ್ನಡ ಸಾಹಿತ್ಯದ ಬಗ್ಗೆ ಪ್ರೀತಿ ಹುಟ್ಟುವಂತೆ ಮಾಡಿದ ಪಿ.ನಿಂಗಪ್ಪನವರು...ಹೀಗೇ. ಆದರೆ ಸದ್ಯಕ್ಕೆ ಇಷ್ಟು ಸಾಕು ಅಂತ ಅನ್ನಿಸುತ್ತಿದೆ. ಇನ್ನು ಯಾವಾಗಲಾದರೂ ಸಮಯ ಸಿಕ್ಕಾಗ ಈ ಬಗ್ಗೆ ಹರಟೋಣ, ಆಯ್ತಾ?.

ನೀವು ನಮ್ಮ ಹಿಂದೂ ಸಂಪ್ರದಾಯದ ಮಂತ್ರಗಳನ್ನು ಗಮನಿಸಿದ್ದೀರಾ? ಎಲ್ಲಾ ಮಂತ್ರಗಳನ್ನೂ ನಾವು ಹೇಳಲು ಪ್ರಾರಂಭಿಸುವುದು "ಶ್ರೀ ಗುರುಭ್ಯೋ ನಮಃ, ಹರಿಃ ಓಂ.." ಅಂತ! ದಿನನಿತ್ಯದ ಗುರುವಂದನೆಗೆ ಎಂತಹ ಸೂಕ್ತ ವಿಧಾನ ಅಲ್ಲವೇ?

3 comments:

Srini said...

ನೀವೂ ನಮ್ಮೂರಿನವ್ರೇ!! ನನ್ನದೇ ಕಾಲೇಜು. ಆದರೆ ನಾನಿದ್ದಾಗ ಸಿತಾಲಕ್ಷ್ಮಿ ಅವರು ನಮಗೆ ಪಾಠ ಮಾಡುತ್ತಿರಲಿಲ್ಲ. ಯಾವ ಬ್ಯಾಚ್ ನಿಮ್ಮದು??

ಶ್ರೀನಿಧಿ

ಶ್ಯಾಮ್ ಕಿಶೋರ್ said...

ಶ್ರೀನಿಧಿ,

ನಾನು ಡಿ.ವಿ.ಎಸ್.ಜೂನಿಯರ್ ಕಾಲೇಜಿನಲ್ಲಿ 92-94 ಬ್ಯಾಚಿನಲ್ಲಿದ್ದೆ.ನಿಮ್ಮದು ಯಾವ ವರ್ಷ? ಅಂದ ಹಾಗೆ ನಿಮ್ಮ ಊರು ಶಿವಮೊಗ್ಗವೋ ಅಥವಾ ಬೀರೂರೋ? ಈಗ ಎಲ್ಲಿದ್ದೀರಾ? ಏನು ಮಾಡುತ್ತಿದ್ದೀರಾ?

ಇಂತಿ,
ಶ್ಯಾಮ್ ಕಿಶೋರ್

ಅನೂಜ್ಞಾ said...

ನಿಮ್ಮ ತಂದೆಯವರು ನನ್ನ ಅಚ್ಚುಮೆಚ್ಚಿನ ಶಿಕ್ಷಕರಲ್ಲಿ ಒಬ್ಬರು. ಇವತ್ತಿಗು ನನ್ನ ಬರವಣಿಗೆಯನ್ನು ಯಾರದರೂ ಹೊಗಳಿದರೆ ಅದಕ್ಕೆ ಕಾರಣಕರ್ತರಾದ ನಿಮ್ಮ ತಂದೆಯವರ ಜ್ಞಾಪಕ ಆಗುತ್ತೆ