Friday, January 05, 2007

ನನಸಾಗುವುದಿಲ್ಲ ಏಕೀ ಕನಸುಗಳು?

ಏನೆಲ್ಲ ಕಲ್ಪನೆಗಳು ಬಾಲ್ಯದಲ್ಲಿ, ಎಳೆಯ ಮನದಲ್ಲಿ;
ಬದುಕೆಂದರೆ ಶುಭ್ರ, ವಿಶಾಲ, ತಿಳಿನೀಲಿ ಬಾಂದಳದಂತೆ,
ಗರಿಗೆದರಿ ಮನದುಂಬಿ ಹಾರಾಡಬಹುದಾದ ಆಂಗಣದಂತೆ,
ಬದುಕೆಂದರೆ ಅನಂತ, ನಿಗೂಢ, ತಾರೆಗಳ ತೋಟದಂತೆ.

ಏನೆಲ್ಲ ಕನಸುಗಳು ಬಾಲ್ಯದಲ್ಲಿ, ಎಳೆಯ ಮನದಲ್ಲಿ;
ವಿಜ್ಞಾನಿಯಾಗಿ ಹೊಸತೇನನ್ನೋ ಕಂಡುಹಿಡಿದಂತೆ,
ಗಗನಯಾತ್ರಿಯಾಗಿ ತಿಂಗಳನ ಅಂಗಳದಿ ನಡೆದಾಡಿದಂತೆ,
ಹಿಮಕವಿದ ಉನ್ನತ ಗಿರಿ-ಶಿಖರಗಳನ್ನು ಮೆಟ್ಟಿ ನಿಂತಂತೆ!

ಏನೆಲ್ಲ ತುಡಿತಗಳು ಬಾಲ್ಯದಲ್ಲಿ, ಎಳೆಯ ಮನದಲ್ಲಿ;
ಹತ್ತು ಮಂದಿಗೆ ಪಾಠ ಕಲಿಸುವ ಗುರುವು ನಾವಾದಂತೆ,
ಚಿತ್ರಕಾರನಾಗಿ ಹೊಸ ಬಣ್ಣಗಳಲಿ ಜಗವ ತೋಯಿಸಿದಂತೆ,
ವೈದ್ಯನಾಗಿ ಜನರ ಸೇವೆಯಲ್ಲಿಯೇ ಧನ್ಯತೆಯ ಪಡೆದಂತೆ!

ಏನೆಲ್ಲ ಆದರ್ಶಗಳು ಬಾಲ್ಯದಲ್ಲಿ, ಎಳೆಯ ಮನದಲ್ಲಿ;
ನವಭಾರತ ನಿರ್ಮಾಣವೆಂಬ ಯಜ್ಞದಲ್ಲಿ ಭಾಗಿಗಳಾದಂತೆ,
ಗಾಂಧಿ, ಸುಭಾಷರ ಧ್ಯೇಯಗಳಿಗೆ ಮರುಜೀವವಿತ್ತಂತೆ,
ನಮ್ಮ ಸಾಧನೆಯ ಚೆಂಬೆಳಕಲ್ಲಿ ಸಮಾಜವನ್ನು ಬೆಳಗಿದಂತೆ.

ನಾವು ಬೆಳೆದಂತೆ ನಮ್ಮ ಕನಸುಗಳ ರಾಶಿ ಕರಗುವುದು ಏಕೆ?
ಯಾಂತ್ರಿಕ ಬಾಳಬಂಡಿಯೋಟವೇ ಕೇಂದ್ರವಾಗುವುದು ಏಕೆ?
ಇಷ್ಟೆಲ್ಲ ತುಡಿತಗಳು, ಕನಸುಗಳು, ನನಸಾಗುವುದಿಲ್ಲವೇಕೆ?
ನಮ್ಮ ಕನಸುಗಳ ಸ್ಫೂರ್ತಿ ಸೆಲೆಯೇ ಬತ್ತಿ ಹೋಗುವುದೇಕೆ?

2 comments:

Ani said...

bhalyane chanda sir nuraaru kanasugala jothe mugdhate koda erutte.

ನಂದಿನಿ said...

ಸರ್ ನಿಮ್ಮ ಕವಿತೆಗೊಂದು ನಮನ. ಎಲ್ಲರು ತಮ್ಮ ಬಾಲ್ಯದಲ್ಲಿ ಕನಸು ಕಾಣೋದು ಸಹಜ, ಆ ಕನಸುಗಳು ನೆರವೇರಲಿಲ್ಲ ಎಂದಾಗ ಮಾತ್ರ ತುಂಬಾ ನೋವಾಗುತ್ತೆ..ನನ್ನ ಜೀವನ ಕೂಡ ಹೀಗೇ ಸಾಗ್ತಿದೆ.