Thursday, January 25, 2007

ಈ ದೇಹ ಮತ್ತು ಇಂದ್ರಿಯಗಳು ತಂತಿವಾದ್ಯವಿದ್ದಂತೆ

ದೊಂದು ಸರಳ, ಸುಂದರ ಕಥೆ. ಆದರೆ ಅಷ್ಟೇ ಅರ್ಥವುಳ್ಳದ್ದು ಕೂಡ. ಇದು ಸಿದ್ಧಾರ್ಥ ಗೌತಮ ಬದ್ಧನಾಗಲು ಕಾರಣವಾದ ಘಟನೆ ಅಂತ ಕೆಲವು ಮೂಲಗಳಲ್ಲಿ ಹೇಳಿದ್ದರೆ, ಇನ್ನು ಕೆಲವೆಡೆ ಗೌತಮ ಬುದ್ಧ ತನ್ನ ಶಿಷ್ಯಂದಿರಿಗೆ ಉಪದೇಶ ನೀಡಲು ಬಳಸಿದ ಕಥೆ ಅಂತ ಹೇಳಿದೆ. ಯಾವುದು ಸರಿ ಅನ್ನುವ ಚರ್ಚೆ ನಮಗೇಕೆ ಅಲ್ಲವೇ? ಏಕೆಂದರೆ ಎರಡು ವಾದಗಳಿಗೂ ಖಚಿತ ಪುರಾವೆಗಳಿಲ್ಲ. ಹಾಗೆ ನೋಡಿದರೆ ಬುದ್ಧನ ಕಾಲದ ಬಗೆಗೇ ಇನ್ನೂ ಇತಿಹಾಸಕಾರರು ಚರ್ಚೆ ಮಾಡುತ್ತಾ ಇದ್ದಾರೆ. ಸಾಕು, ನಿನ್ನ ಮಾತೇ ಬಹಳ ಆಯಿತು, ಕಥೆ ಮುಂದುವರೆಸು ಅನ್ನುತ್ತೀರಾ? ಹೌದು, ನನಗೂ ಹಾಗೇ ಅನ್ನಿಸಿತು! ಬನ್ನಿ ಕಥೆಯತ್ತ ಗಮನ ಹರಿಸೋಣ.

ರಾಜಕುಮಾರ ಸಿದ್ಧಾರ್ಥ ಅರಮನೆಯಿಂದ ಹೊರಬಂದವನು, ಸುಮಾರು ಆರು ವರ್ಷಗಳ ಕಾಲ ಹಗಲೂ ರಾತ್ರಿ ದೇಹವನ್ನು ಅತ್ಯಂತ ಕಠಿಣವಾಗಿ ದಂಡಿಸಿ, ಇಂದ್ರಿಯಗಳನ್ನು ಸಂಪೂರ್ಣ ಹತೋಟಿಯಲ್ಲಿಟ್ಟುಕೊಂಡು, ಸತ್ಯದ ಸಾಕ್ಷಾತ್ಕಾರಕ್ಕಾಗಿ ಪ್ರಯತ್ನಿಸಿದ. ಏನೇ ಪ್ರಯತ್ನ ಮಾಡಿದರೂ, ದಿನೇ ದಿನೇ ಅವನ ದೇಹ, ಮನಸ್ಸುಗಳು ಶಿಥಿಲವಾಗುತ್ತಾ ಹೋದವೇ ಹೊರತು, ಅವನು ಹುಡುಕಾಡುತ್ತಿದ್ದ ಸತ್ಯ ಮಾತ್ರ ಇನ್ನೂ ದಕ್ಕಿರಲಿಲ್ಲ. ಕೊನೆಗೊಂದು ದಿನ ಸಿದ್ಧಾರ್ಥನ ದೇಹ ನಿಶ್ಯಕ್ತಿಯಿಂದ ಕುಸಿದು ಹೋಯಿತು. ಆತನ ಸಾಧನೆಯನ್ನು ಗಮನಿಸುತ್ತಿದ್ದ ಸುಜಾತ ಎಂಬಾಕೆ, ಇದನ್ನು ನೋಡಿ ತಡೆಯಲಾರದೆ, ಆಡಿನ ಹಾಲನ್ನು ಕೊಟ್ಟು ಅವನನ್ನು ಬದುಕಿಸಿದಳು. ಸ್ವಲ್ಪ ದಿನಗಳ ಕಾಲ ಒಳ್ಳೆಯ ಆಹಾರವನ್ನು ನೀಡಿ, ದೇಹದಲ್ಲಿ ಸ್ವಲ್ಪ ಕಸುವು ಬರುವಂತೆ ಮಾಡಿದಳು. ಸುಧಾರಿಸಿಕೊಂಡ ಸಿದ್ಧಾರ್ಥ ಚಿಂತಿಸುತ್ತಾ ಕುಳಿತ: "ನಾನೆಲ್ಲಿ ಎಡವಿದೆ? ನನಗೇಕೆ ಪರಮ ಸತ್ಯ ದಕ್ಕುತ್ತಿಲ್ಲ?".

ಚಿಂತಾಕ್ರಾಂತನಾದ ಸಿದ್ಧಾರ್ಥ ಎಲ್ಲೆಂದರಲ್ಲಿ ಸುಮ್ಮನೆ ಅಲೆದಾಡಿದ. ಒಂದು ದಿನ ಹೀಗೆಯೇ ತಿರುಗಾಡುತ್ತಿದ್ದಾಗ ಕುತೂಹಲಕಾರಿ ಘಟನೆಯೊಂದು ಕಣ್ಣಿಗೆ ಬಿತ್ತು. ಅದನ್ನೇ ಗಮನಿಸುತ್ತಾ ನಿಂತ. ಅದೇನೆಂದರೆ, ವ್ಯಕ್ತಿಯೊಬ್ಬ ಚಿಕ್ಕ ಹುಡುಗನಿಗೆ ತಂತಿವಾದ್ಯವೊಂದನ್ನು (ವೀಣೆ, ತಂಬೂರಿ ತರಹದ ಯಾವುದೋ ಒಂದು ವಾದ್ಯ) ಬಾರಿಸುವುದನ್ನು ಹೇಳಿಕೊಡುತ್ತಿದ್ದ. ಪಾಠ ಆರಂಭಿಸುವ ಮೊದಲು ಆ ವ್ಯಕ್ತಿ ಬಾಲಕನಿಗೆ ಹೇಳಿದ: "ನೋಡು ಮಗೂ, ತಂತಿವಾದ್ಯದಲ್ಲಿ ಸ್ವರ ಚೆನ್ನಾಗಿ ಹೊರಡಬೇಕೆಂದರೆ ಮೊದಲು ವಾದ್ಯವನ್ನು ಸರಿಯಾಗಿ ಶೃತಿಗೊಳಿಸಬೇಕು. ಇದು ಬಹಳ ಮುಖ್ಯ. ಎಲ್ಲಿ ನೋಡೋಣ, ಶೃತಿ ಹಿಡಿ; ತಂತಿಯನ್ನು ಬಿಗಿಮಾಡು". ಹುಡುಗ ತಂತಿಯನ್ನು ಎಳೆದು ಬಿಗಿಮಾಡಿದ. ತಂತಿ ಮೀಟಿದಾಗ ಸ್ವರ ಬಹಳ ಕೀರಲಾಗಿ ಹೊರಟಿತು. ಆಗ ಆ ವ್ಯಕ್ತಿ "ನೋಡು, ಹೀಗೆ ತಂತಿಯನ್ನು ಬಹಳ ಬಿಗಿ ಮಾಡಿದರೆ ಸ್ವರ ಕೀರಲಾಗುತ್ತದೆ. ಸ್ವಲ್ಪ ಸಡಿಲ ಮಾಡಿ ನೋಡು" ಎಂದು ಸಲಹೆ ನೀಡಿದ. ಸರಿ, ಬಾಲಕ ಈ ಬಾರಿ ತಂತಿಯನ್ನು ಸಡಿಲಗೊಳಿಸಿದ. ಸಡಿಲವಾದದ್ದು ಹೆಚ್ಚಾಯಿತೇನೋ, ಸ್ವರ ಬಹಳ ಮಂದವಾಗಿ ಹೊರಟಿತು. ಆಗ ಆ ವ್ಯಕ್ತಿ ತಂತಿವಾದ್ಯವನ್ನು ತಾನೇ ತೆಗೆದುಕೊಂಡು, ಬಹಳ ಹೊತ್ತು ಪ್ರಯತ್ನಿಸಿ ಶೃತಿಮಾಡಿದ. ಸ್ವರ ಹದವಾಗಿ, ಕಿವಿಗಿಂಪಾಗಿ ಹೊರಟಿತು.

ಗ ಆ ವ್ಯಕ್ತಿ ಹುಡುಗನನ್ನು ಕುರಿತು, "ಈ ಶೃತಿ ಹಿಡಿಯುವುದೇ ಮೊದಲ ಮತ್ತು ಬಹು ಮುಖ್ಯ ಪಾಠ. ತಂತಿಯನ್ನು ಬಹಳ ಬಿಗಿಗೊಳಿಸಿದಲ್ಲಿ ಸ್ವರ ಕೀರಲಾಗುತ್ತದೆ. ಅದೇ ಅತಿ ಸಡಿಲಗೊಳಿಸಿದರೆ, ಸ್ವರ ಮಂದವಾಗುತ್ತದೆ. ಎರಡೂ ಕೂಡ ಆಗಬಾರದು. ಇವೆರಡರ ಮಧ್ಯೆ, ಸೂಕ್ತವಾದ ಹದದಲ್ಲಿ ತಂತಿಯನ್ನು ಬಿಗಿ ಮಾಡಬೇಕು. ಆಗ ಮಾತ್ರ ತಂತಿವಾದ್ಯದ ಸ್ವರ ಕೇಳಲು ಇಂಪಾಗಿರುತ್ತದೆ" ಎಂದು ಹೇಳಿದ. ಇದನ್ನೇ ಗಮನಿಸುತ್ತಾ ನಿಂತಿದ್ದ ಸಿದ್ಧಾರ್ಥನಿಗೆ, ತಾನು ಇಷ್ಟು ದಿನ ಮಾಡುತ್ತಿದ್ದ ತಪ್ಪು ನಿಚ್ಚಳವಾಗಿ ಹೊಳೆದಂತಾಯಿತು. "ಹೌದು, ಈ ದೇಹ, ಮನಸ್ಸು ಮತ್ತು ಇಂದ್ರಿಯಗಳೂ ಒಂದು ತಂತಿವಾದ್ಯದಂತೆ. ಅಗತ್ಯಕ್ಕಿಂತ ಹೆಚ್ಚು ಬಿಗಿ ಮಾಡಿದರೂ, ಅಥವಾ ಸಡಿಲ ಬಿಟ್ಟರೂ, ಬದುಕಿನಲ್ಲಿ ಯಾವುದೇ ಸಾಧನೆ ಸಾಧ್ಯವಿಲ್ಲ. ಅಯ್ಯೋ! ಇಷ್ಟು ವರ್ಷ ನಾನೆಂತಹ ತಪ್ಪು ಮಾಡಿದೆ. ಅಗತ್ಯಕ್ಕಿಂತ ಹೆಚ್ಚು ದೇಹದಂಡನೆ ಮಾಡಿದೆ. ಅದಕ್ಕೇ ನನಗೆ ಸತ್ಯ ದಕ್ಕಿಲ್ಲ" ಎಂದು ಯೋಚಿಸಿದ ಸಿದ್ಧಾರ್ಥ. ಮುಂದಿನ ದಾರಿ ಸ್ಪಷ್ಟವಾಯಿತು. ಮನಸ್ಸು ಹಗುರಾಯಿತು. ಸಿದ್ಧಾರ್ಥ ಬುದ್ಧನಾದ!

ಜ್ಞಾನೋದಯವಾದ ನಂತರವೂ ಗೌತಮ ಬುದ್ಧ ಈ ವಿಚಾರವನ್ನು ಮರೆಯಲಿಲ್ಲ. "ಈ ದೇಹ, ಮನಸ್ಸು, ಇಂದ್ರಿಯಗಳು ತಂತಿವಾದ್ಯದಂತೆ. ಹದವರಿತು ಬಿಗಿ ಮಾಡುವುದೇ ಸಾಧನೆಯ ಹಿಂದಿನ ಗುಟ್ಟು" ಎಂಬ ಸೂತ್ರವನ್ನು "ಮಧ್ಯಮ ಮಾರ್ಗ" ಎನ್ನುವ ಹೆಸರಿನಲ್ಲಿ ಬೋಧಿಸಿದ.

No comments: