
Friday, January 26, 2007
Thursday, January 25, 2007
ಮುಲ್ಲಾ ಕಥೆ: ಕೆಲವೊಮ್ಮೆ ಪೆದ್ದನಂತೆ ನಟಿಸುವುದೇ ಲಾಭದಾಯಕ!
ದಿನವೂ ಹೀಗೆ ಜನರ ಅಪಹಾಸ್ಯಕ್ಕೆ ಗುರಿಯಾಗುತ್ತಿದ್ದ ಮುಲ್ಲಾನ ಬಗ್ಗೆ ಅಯ್ಯೋ ಎನಿಸಿ ಒಂದು ದಿನ ಗೆಳೆಯನೊಬ್ಬ ಮುಲ್ಲಾನನ್ನು ಕೇಳಿಯೇಬಿಟ್ಟ: "ಮುಲ್ಲಾ, ನೀನೇನು ಮಾಡುತ್ತಿದ್ದೀಯಾ ಅನ್ನುವ ಅರಿವೇ ಇಲ್ಲವಲ್ಲ. ಜನರು ನಿನ್ನ ಮುಂದೆ ಎರಡು ನಾಣ್ಯಗಳನ್ನು ಇಟ್ಟಾಗ ದೊಡ್ಡದನ್ನು ಆರಿಸಿಕೋ. ಬೇಗ ಹೆಚ್ಚು ಹಣ ಗಳಿಸಬಹುದು ಮತ್ತು ಜನರು ನಿನ್ನನ್ನು ನೋಡಿ ನಗುವುದಿಲ್ಲ".
ಮುಲ್ಲಾ ನಸ್ರುದ್ದೀನ್ ಹೇಳಿದ, "ಗೆಳೆಯಾ, ನೀನು ಹೇಳುವುದು ನಿಜ. ಆದರೆ ನಾನೇನಾದರೂ ಹಾಗೆ ಮಾಡಿದಲ್ಲಿ, ನಾಳೆಯಿಂದ ಜನರಿಗೆ ನನನ್ನು ಪೆದ್ದ ಅಂತ ಹಾಸ್ಯ ಮಾಡಿ ನಗುವ ಅವಕಾಶ ತಪ್ಪಿ ಹೋಗುತ್ತದೆ. ಆಗವರು ನನಗೆ ದುಡ್ಡು ಕೊಡುವುದನ್ನೇ ನಿಲ್ಲಿಸಬಹುದು. ಬರುವ ಹಣವೂ ನಿಂತು ಹೋದರೆ ಆಗೇನು ಮಾಡಲಿ? ನನಗೆ ಎಲ್ಲವೂ ಗೊತ್ತಿದ್ದೇ ಹೀಗೆ ಮಾಡುತ್ತಾ ಇದ್ದೀನಿ. ನಿಜಕ್ಕೂ ಪೆದ್ದನಾಗುತ್ತಿರುವುದು ನಾನಲ್ಲ, ಪದೇ ಪದೇ ಬಂದು ಹಣ ಹಾಕಿ ಹೋಗುತ್ತಾರಲ್ಲಾ ಅವರು!".
ಸುಮ್ನೆ ನಗೋಕೆ: ಹಾಲಿವುಡ್ ಸಿನೆಮಾಗಳ ಕನ್ನಡ ಅವತರಣಿಕೆಗಳು
ಹಾಲಿವುಡ್ ಸಿನೆಮಾ--->ಕನ್ನಡ ಅವತರಣಿಕೆ
--------------------------------------------------------
Pirates Of The Caribbean -->ಕಾರವಾರದ ಸಮುದ್ರ ಕಳ್ಳರು
Big Trouble In Little China--> ಚಿಕ್ಕಪೇಟೆಯಲ್ಲಿ ದೊಡ್ಡ ಕಿರಿಕ್ಕು
Devil's Advocate -->ಭೂತಯ್ಯನ ವಕೀಲ
American Pie--> ಮೈಸೂರು ಪಾಕ್
Die Another Day--> ಇನ್ನೊಂದು ದಿನ ಸಾಯಿ
Sleepless In Seattle -->ಕೊಳ್ಳೇಗಾಲದಲ್ಲಿ ನಿದ್ದೆ ಇಲ್ಲವಾದಾಗ
Gods Must Be Crazy -->ದೇವರಿಗೆ ತಲೆ ಕೆಟ್ಟಿರಬೇಕು
Mission Impossible -->ಆಗದಿರೋ ಕೆಲಸ
Once Upon A Time In Mexico--> ಮಂಡ್ಯದಲ್ಲಿ ಒಂದು ದಿನ...
ಈ ದೇಹ ಮತ್ತು ಇಂದ್ರಿಯಗಳು ತಂತಿವಾದ್ಯವಿದ್ದಂತೆ
ರಾಜಕುಮಾರ ಸಿದ್ಧಾರ್ಥ ಅರಮನೆಯಿಂದ ಹೊರಬಂದವನು, ಸುಮಾರು ಆರು ವರ್ಷಗಳ ಕಾಲ ಹಗಲೂ ರಾತ್ರಿ ದೇಹವನ್ನು ಅತ್ಯಂತ ಕಠಿಣವಾಗಿ ದಂಡಿಸಿ, ಇಂದ್ರಿಯಗಳನ್ನು ಸಂಪೂರ್ಣ ಹತೋಟಿಯಲ್ಲಿಟ್ಟುಕೊಂಡು, ಸತ್ಯದ ಸಾಕ್ಷಾತ್ಕಾರಕ್ಕಾಗಿ ಪ್ರಯತ್ನಿಸಿದ. ಏನೇ ಪ್ರಯತ್ನ ಮಾಡಿದರೂ, ದಿನೇ ದಿನೇ ಅವನ ದೇಹ, ಮನಸ್ಸುಗಳು ಶಿಥಿಲವಾಗುತ್ತಾ ಹೋದವೇ ಹೊರತು, ಅವನು ಹುಡುಕಾಡುತ್ತಿದ್ದ ಸತ್ಯ ಮಾತ್ರ ಇನ್ನೂ ದಕ್ಕಿರಲಿಲ್ಲ. ಕೊನೆಗೊಂದು ದಿನ ಸಿದ್ಧಾರ್ಥನ ದೇಹ ನಿಶ್ಯಕ್ತಿಯಿಂದ ಕುಸಿದು ಹೋಯಿತು. ಆತನ ಸಾಧನೆಯನ್ನು ಗಮನಿಸುತ್ತಿದ್ದ ಸುಜಾತ ಎಂಬಾಕೆ, ಇದನ್ನು ನೋಡಿ ತಡೆಯಲಾರದೆ, ಆಡಿನ ಹಾಲನ್ನು ಕೊಟ್ಟು ಅವನನ್ನು ಬದುಕಿಸಿದಳು. ಸ್ವಲ್ಪ ದಿನಗಳ ಕಾಲ ಒಳ್ಳೆಯ ಆಹಾರವನ್ನು ನೀಡಿ, ದೇಹದಲ್ಲಿ ಸ್ವಲ್ಪ ಕಸುವು ಬರುವಂತೆ ಮಾಡಿದಳು. ಸುಧಾರಿಸಿಕೊಂಡ ಸಿದ್ಧಾರ್ಥ ಚಿಂತಿಸುತ್ತಾ ಕುಳಿತ: "ನಾನೆಲ್ಲಿ ಎಡವಿದೆ? ನನಗೇಕೆ ಪರಮ ಸತ್ಯ ದಕ್ಕುತ್ತಿಲ್ಲ?".
ಚಿಂತಾಕ್ರಾಂತನಾದ ಸಿದ್ಧಾರ್ಥ ಎಲ್ಲೆಂದರಲ್ಲಿ ಸುಮ್ಮನೆ ಅಲೆದಾಡಿದ. ಒಂದು ದಿನ ಹೀಗೆಯೇ ತಿರುಗಾಡುತ್ತಿದ್ದಾಗ ಕುತೂಹಲಕಾರಿ ಘಟನೆಯೊಂದು ಕಣ್ಣಿಗೆ ಬಿತ್ತು. ಅದನ್ನೇ ಗಮನಿಸುತ್ತಾ ನಿಂತ. ಅದೇನೆಂದರೆ, ವ್ಯಕ್ತಿಯೊಬ್ಬ ಚಿಕ್ಕ ಹುಡುಗನಿಗೆ ತಂತಿವಾದ್ಯವೊಂದನ್ನು (ವೀಣೆ, ತಂಬೂರಿ ತರಹದ ಯಾವುದೋ ಒಂದು ವಾದ್ಯ) ಬಾರಿಸುವುದನ್ನು ಹೇಳಿಕೊಡುತ್ತಿದ್ದ. ಪಾಠ ಆರಂಭಿಸುವ ಮೊದಲು ಆ ವ್ಯಕ್ತಿ ಬಾಲಕನಿಗೆ ಹೇಳಿದ: "ನೋಡು ಮಗೂ, ತಂತಿವಾದ್ಯದಲ್ಲಿ ಸ್ವರ ಚೆನ್ನಾಗಿ ಹೊರಡಬೇಕೆಂದರೆ ಮೊದಲು ವಾದ್ಯವನ್ನು ಸರಿಯಾಗಿ ಶೃತಿಗೊಳಿಸಬೇಕು. ಇದು ಬಹಳ ಮುಖ್ಯ. ಎಲ್ಲಿ ನೋಡೋಣ, ಶೃತಿ ಹಿಡಿ; ತಂತಿಯನ್ನು ಬಿಗಿಮಾಡು". ಹುಡುಗ ತಂತಿಯನ್ನು ಎಳೆದು ಬಿಗಿಮಾಡಿದ. ತಂತಿ ಮೀಟಿದಾಗ ಸ್ವರ ಬಹಳ ಕೀರಲಾಗಿ ಹೊರಟಿತು. ಆಗ ಆ ವ್ಯಕ್ತಿ "ನೋಡು, ಹೀಗೆ ತಂತಿಯನ್ನು ಬಹಳ ಬಿಗಿ ಮಾಡಿದರೆ ಸ್ವರ ಕೀರಲಾಗುತ್ತದೆ. ಸ್ವಲ್ಪ ಸಡಿಲ ಮಾಡಿ ನೋಡು" ಎಂದು ಸಲಹೆ ನೀಡಿದ. ಸರಿ, ಬಾಲಕ ಈ ಬಾರಿ ತಂತಿಯನ್ನು ಸಡಿಲಗೊಳಿಸಿದ. ಸಡಿಲವಾದದ್ದು ಹೆಚ್ಚಾಯಿತೇನೋ, ಸ್ವರ ಬಹಳ ಮಂದವಾಗಿ ಹೊರಟಿತು. ಆಗ ಆ ವ್ಯಕ್ತಿ ತಂತಿವಾದ್ಯವನ್ನು ತಾನೇ ತೆಗೆದುಕೊಂಡು, ಬಹಳ ಹೊತ್ತು ಪ್ರಯತ್ನಿಸಿ ಶೃತಿಮಾಡಿದ. ಸ್ವರ ಹದವಾಗಿ, ಕಿವಿಗಿಂಪಾಗಿ ಹೊರಟಿತು.
ಆಗ ಆ ವ್ಯಕ್ತಿ ಹುಡುಗನನ್ನು ಕುರಿತು, "ಈ ಶೃತಿ ಹಿಡಿಯುವುದೇ ಮೊದಲ ಮತ್ತು ಬಹು ಮುಖ್ಯ ಪಾಠ. ತಂತಿಯನ್ನು ಬಹಳ ಬಿಗಿಗೊಳಿಸಿದಲ್ಲಿ ಸ್ವರ ಕೀರಲಾಗುತ್ತದೆ. ಅದೇ ಅತಿ ಸಡಿಲಗೊಳಿಸಿದರೆ, ಸ್ವರ ಮಂದವಾಗುತ್ತದೆ. ಎರಡೂ ಕೂಡ ಆಗಬಾರದು. ಇವೆರಡರ ಮಧ್ಯೆ, ಸೂಕ್ತವಾದ ಹದದಲ್ಲಿ ತಂತಿಯನ್ನು ಬಿಗಿ ಮಾಡಬೇಕು. ಆಗ ಮಾತ್ರ ತಂತಿವಾದ್ಯದ ಸ್ವರ ಕೇಳಲು ಇಂಪಾಗಿರುತ್ತದೆ" ಎಂದು ಹೇಳಿದ. ಇದನ್ನೇ ಗಮನಿಸುತ್ತಾ ನಿಂತಿದ್ದ ಸಿದ್ಧಾರ್ಥನಿಗೆ, ತಾನು ಇಷ್ಟು ದಿನ ಮಾಡುತ್ತಿದ್ದ ತಪ್ಪು ನಿಚ್ಚಳವಾಗಿ ಹೊಳೆದಂತಾಯಿತು. "ಹೌದು, ಈ ದೇಹ, ಮನಸ್ಸು ಮತ್ತು ಇಂದ್ರಿಯಗಳೂ ಒಂದು ತಂತಿವಾದ್ಯದಂತೆ. ಅಗತ್ಯಕ್ಕಿಂತ ಹೆಚ್ಚು ಬಿಗಿ ಮಾಡಿದರೂ, ಅಥವಾ ಸಡಿಲ ಬಿಟ್ಟರೂ, ಬದುಕಿನಲ್ಲಿ ಯಾವುದೇ ಸಾಧನೆ ಸಾಧ್ಯವಿಲ್ಲ. ಅಯ್ಯೋ! ಇಷ್ಟು ವರ್ಷ ನಾನೆಂತಹ ತಪ್ಪು ಮಾಡಿದೆ. ಅಗತ್ಯಕ್ಕಿಂತ ಹೆಚ್ಚು ದೇಹದಂಡನೆ ಮಾಡಿದೆ. ಅದಕ್ಕೇ ನನಗೆ ಸತ್ಯ ದಕ್ಕಿಲ್ಲ" ಎಂದು ಯೋಚಿಸಿದ ಸಿದ್ಧಾರ್ಥ. ಮುಂದಿನ ದಾರಿ ಸ್ಪಷ್ಟವಾಯಿತು. ಮನಸ್ಸು ಹಗುರಾಯಿತು. ಸಿದ್ಧಾರ್ಥ ಬುದ್ಧನಾದ!
ಜ್ಞಾನೋದಯವಾದ ನಂತರವೂ ಗೌತಮ ಬುದ್ಧ ಈ ವಿಚಾರವನ್ನು ಮರೆಯಲಿಲ್ಲ. "ಈ ದೇಹ, ಮನಸ್ಸು, ಇಂದ್ರಿಯಗಳು ತಂತಿವಾದ್ಯದಂತೆ. ಹದವರಿತು ಬಿಗಿ ಮಾಡುವುದೇ ಸಾಧನೆಯ ಹಿಂದಿನ ಗುಟ್ಟು" ಎಂಬ ಸೂತ್ರವನ್ನು "ಮಧ್ಯಮ ಮಾರ್ಗ" ಎನ್ನುವ ಹೆಸರಿನಲ್ಲಿ ಬೋಧಿಸಿದ.
Friday, January 05, 2007
ಸಂಸ್ಕೃತ ಸುಭಾಷಿತಗಳು - ಭಾಗ ೧
ಬೇರೆಲ್ಲ ಸಂಪತ್ತುಗಳೂ ಹಂಚಿಕೊಂಡಷ್ಟೂ ಕ್ಷೀಣಿಸುತ್ತವೆ.
ಆದರೆ (ನಿನ್ನ ಬಳಿಯಿರುವ) ವಿದ್ಯೆಯೆಂಬ ಸಂಪತ್ತು ಮಾತ್ರ
ಹಂಚಿಕೊಂಡಷ್ಟೂ ವೃದ್ಧಿಸುತ್ತದೆ ಮತ್ತು ಗೋಪ್ಯವಾಗಿಟ್ಟಷ್ಟೂ ಕ್ಷೀಣಿಸುತ್ತದೆ!
- ಸಂಸ್ಕೃತ ಸುಭಾಷಿತ
ಕಾದ ಕಾವಲಿಯ ಮೇಲೆ ಬಿದ್ದ ನೀರ ಹನಿಯೊಂದು ಆವಿಯಾಗಿ ತನ್ನ ಸ್ವರೂಪವನ್ನೇ ಕಳೆದುಕೊಳ್ಳುತ್ತದೆ.
ಕಮಲದೆಲೆಯ ಮೇಲೆ ಬಿದ್ದ ಅದೇ ನೀರ ಹನಿಯು ಸೂರ್ಯನ ಬೆಳಕಿನಲ್ಲಿ ಮುತ್ತಿನಂತೆ ಕಂಗೊಳಿಸುತ್ತದೆ.
ಸ್ವಾತಿ ನಕ್ಷತ್ರದಲ್ಲಿ ಕಪ್ಪೆಚಿಪ್ಪನ್ನು ಪ್ರವೇಶಿಸಿದ ಅದೇ ನೀರ ಹನಿಯು ಅನರ್ಘ್ಯವಾದ ಮುತ್ತೇ ಆಗುತ್ತದೆ.
ಹೀಗೆ ಉತ್ತಮ, ಮಧ್ಯಮ ಮತ್ತು ಅಧಮವೆಂಬ ಮೂರು ಗುಣಗಳೂ ಸಹವಾಸದಿಂದ ಉಂಟಾಗುತ್ತವೆ!
- ಭರ್ತೃಹರಿಯ ನೀತಿಶತಕ
ಕಾಗೆ ಕಪ್ಪು. ಕೋಗಿಲೆ ಕೂಡಾ ಕಪ್ಪು. ಹಾಗಾದರೆ ಕಾಗೆ-ಕೋಗಿಲೆಗಳ ನಡುವಣ ವ್ಯತ್ಯಾಸ ತಿಳಿಯುವುದು ಹೇಗೆ?
ಬಹಳ ಸುಲಭ; ವಸಂತಮಾಸ ಬಂದೊಡನೆ ಕಾಗೆ ಕಾಗೆಯೇ, ಕೋಗಿಲೆ ಕೋಗಿಲೆಯೇ!
(ವಸಂತಮಾಸದಲ್ಲಿ ಮಾವು ಚಿಗುರುವುದರಿಂದ ಕೋಗಿಲೆ ಇಂಪಾದ ದನಿಯಲ್ಲಿ ಹಾಡುತ್ತದೆ. ಕಾಗೆಗದು ಅಸಾಧ್ಯ ಎಂಬರ್ಥದಲ್ಲಿ)
- ಸಂಸ್ಕೃತ ಸುಭಾಷಿತ
ಲಕ್ಷ್ಮಣ, ಲಂಕೆಯು ಸುವರ್ಣಮಯ ರಾಜ್ಯವೇ ಆದರೂ ಅದು ನನ್ನನ್ನು ಆಕರ್ಷಿಸುತ್ತಿಲ್ಲ.
(ಏಕೆಂದರೆ) ತಾಯಿ ಮತ್ತು ತಾಯ್ನಾಡು ಸ್ವರ್ಗಕ್ಕಿಂತಲೂ ಕೂಡಾ ಮಿಗಿಲಾದುವು!
- ವಾಲ್ಮೀಕಿ ರಾಮಾಯಣ (ರಾಮನು ರಾವಣನನ್ನು ಸಂಹರಿಸಿದ ಬಳಿಕ ಲಕ್ಷ್ಮಣನಿಗೆ ಹೇಳುವ ಮಾತು)
ಹೇಗೆ ಹಾಲು, ಮೊಸರುಗಳಿಗಿಂತ ತಡವಾಗಿ ಹುಟ್ಟಿದರೂ ತುಪ್ಪವು ಹಾಲು, ಮೊಸರುಗಳಿಗಿಂತ ಶ್ರೇಷ್ಠ ಎನಿಸಿಕೊಳ್ಳುವುದೋ,
ಹಾಗೆಯೇ ಹಿರಿತನವೆನ್ನುವುದು ಉತ್ತಮ ಗುಣಗಳಿಂದಾಗಿ ಲಭ್ಯವಾಗುವುದೇ ಹೊರತು ಕೇವಲ ವಯಸ್ಸಿನಿಂದಲ್ಲ.
- ಸಂಸ್ಕೃತ ಸುಭಾಷಿತ
ನುಡಿಮುತ್ತುಗಳು - ಸ್ವಾಮಿ ವಿವೇಕಾನಂದ - ಭಾಗ ೧
ನಮ್ಮಲ್ಲಿ ನಾವು ವಿಶ್ವಾಸ ಕಳೆದುಕೊಳ್ಳದಿರುವುದು ಮತ್ತು ನಮ್ಮನ್ನು ನಾವು ದ್ವೇಷಿಸದಿರುವುದೇ ನಮ್ಮ ಮೊದಲ ಕರ್ತವ್ಯ. ಮೊದಲು ನಮ್ಮ ಬಗ್ಗೆ ನಮಗೆ ನಂಬಿಕೆಯಿದ್ದಲ್ಲಿ ಮಾತ್ರ ಭಗವಂತನಲ್ಲಿ ನಂಬಿಕೆಯಿಡಲು ಸಾಧ್ಯ. ತನ್ನನ್ನೇ ನಂಬದವನು ಭಗವಂತನನ್ನು ಹೇಗೆ ತಾನೇ ನಂಬಲು ಸಾಧ್ಯ?!- ಸ್ವಾಮಿ ವಿವೇಕಾನಂದ
ಒಂದು ಆದರ್ಶವನ್ನು, ಗುರಿಯನ್ನು ಕೈಗೆತ್ತಿಕೊಳ್ಳಿ. ಕೇವಲ ಆ ಗುರಿಯ ಬಗ್ಗೆ ಮಾತ್ರ ಯೋಚಿಸಿ, ಚಿಂತಿಸಿ. ನಿಮ್ಮ ಬದುಕನ್ನೇ ಅದಕ್ಕಾಗಿ ಮುಡಿಪಾಗಿಡಿ. ಆ ಗುರಿಯು ನಿಮ್ಮ ಬುದ್ಧಿ, ಮನಸ್ಸು, ಇಂದ್ರಿಯಗಳು, ನರ-ನಾಡಿಗಳನ್ನೆಲ್ಲ ವ್ಯಾಪಿಸಲಿ. ಬೇರೆಲ್ಲ ಆಲೋಚನೆಗಳನ್ನು ಬದಿಗಿಡಿ. ಇದೇ ಯಶಸ್ಸಿನ ಏಕಮಾತ್ರ ಸೂತ್ರ!- ಸ್ವಾಮಿ ವಿವೇಕಾನಂದ
ಆಧ್ಯಾತ್ಮಿಕ ಮತ್ತು ಧಾರ್ಮಿಕ ಪ್ರಗತಿಯ ಮೊದಲ ಗುರುತು ಸದಾ ಹಸನ್ಮುಖಿಯಾಗಿರುವುದು!- ಸ್ವಾಮಿ ವಿವೇಕಾನಂದ
ಈ ಜಗತ್ತೆನ್ನುವುದು ನಮ್ಮನ್ನು ನಾವು ಗಟ್ಟಿಗೊಳಸಲೆಂದೇ ಇರುವ ವ್ಯಾಯಾಮಶಾಲೆ.- ಸ್ವಾಮಿ ವಿವೇಕಾನಂದ
ಜಗತ್ತಿನ ಪರಮೋಚ್ಚ ಧರ್ಮವೆಂದರೆ ನಮ್ಮ ಮೂಲಸ್ವರೂಪದಲ್ಲಿ, ಅಂತಃಸ್ಸತ್ವದಲ್ಲಿ ನಂಬಿಕೆಯಿಡುವುದು.- ಸ್ವಾಮಿ ವಿವೇಕಾನಂದ
ಪ್ರತಿಯೊಬ್ಬ ಮಾನವನಲ್ಲೂ ಸುಪ್ತವಾಗಿರುವ ದೈವೀ ಶಕ್ತಿಯನ್ನು ಪ್ರಕಟಗೊಳಿಸಿ, ಪ್ರಕಾಶಿಸುವಂತೆ ಮಾಡುವುದೇ ನಿಜವಾದ ಧರ್ಮ!- ಸ್ವಾಮಿ ವಿವೇಕಾನಂದ
ಕರ್ನಾಟಕದ ಸುಂದರ ಚಿತ್ರಗಳುಳ್ಳ ಒಂದು "ಸ್ಕ್ರೀನ್ ಸೇವರ್"
ಅದರ ಕೊಂಡಿ ಇಲ್ಲಿದೆ //http://thatskannada.oneindia.in/screensaver/karnataka.exe
ಸೂಚನೆ: ಇದು ".exe" ಫೈಲ್ ಆದ್ದರಿಂದ ಒಮ್ಮೆ ಸರಿಯಾಗಿ ನೋಡಿ ಆಮೇಲೆ ಡೌನ್ಲೋಡ್ ಮಾಡಿಕೊಳ್ಳಿ. ಆಕಸ್ಮಾತ್ ಇದರ ಸ್ಥಳ ಬದಲಾಗಿದ್ದು ಇನ್ನೇನಾದರೂ ".exe" ಇದ್ದಲ್ಲಿ ಕಷ್ಟ!
ಶ್ರೀ ಗುರುಭ್ಯೋ ನಮಃ ಹರಿಃ ಓಂ....
ನನ್ನ ಪಾಲಿಗೆ ಮನೆ ನಿಜಕ್ಕೂ ಮೊದಲ ಪಾಠಶಾಲೆಯೇ ಆಗಿತ್ತು. ನಾನು "ಎಲ್.ಕೆ.ಜಿ.-ಯು.ಕೆ.ಜಿ."ಗಳ ಗೋಜಲಿಗೆ ಸಿಕ್ಕಿಕೊಳ್ಳದೆ ನೇರವಾಗಿ ಒಂದನೇ ತರಗತಿಗೆ ಸೇರಿದೆ. ಹಾಗಾಗಿ ಆ ಎರಡು ವರ್ಷಗಳೂ ಮನೆಯೆಂಬ ಪಾಠಶಾಲೆಯಲ್ಲಿ ನಮ್ಮಜ್ಜನೇ ಮೊದಲ ಗುರು. ತಿಥಿ-ಮಾಸ-ನಕ್ಷತ್ರಗಳು, ಸಂವತ್ಸರಗಳು, ಶ್ಲೋಕಗಳು, ಅಮರಕೋಶ ಹೀಗೆ ಎಷ್ಟು ಹೇಳಿಕೊಟ್ಟರೂ ಅಜ್ಜನ ಕಲಿಸುವ ಪಟ್ಟಿ ಮುಗಿಯುತ್ತಿರಲಿಲ್ಲ! ಅಲ್ಲಿಂದ ಪ್ರಾರಂಭವಾದ ಅವರ ಅಧ್ಯಾಪನ ನಾನು 10ನೇ ತರಗತಿಗೆ ಬರುವ ತನಕವೂ ಮುಂದುವರೆಯಿತು. ಶಾಲೆಯಲ್ಲಿ ಕಲಿಯುವ ಮೊದಲೇ "ಶ್ಯಾಮೂ, ಮುಂದೆ ಬೇಕಾಗುತ್ತೆ ಬಾರೋ" ಅಂತ ಎಳೆದು ಕೂರಿಸಿಕೊಂಡು ಅಜ್ಜ ಸಂಸ್ಕೃತ ಹೇಳಿಕೊಟ್ಟದ್ದು ಇನ್ನೂ ನಿನ್ನೆ-ಮೊನ್ನೆಯದೇನೋ ಅನ್ನುವಂತೆ ನೆನಪಿದೆ. ನನಗೆ ಸುಮಾರು 13-14 ವರ್ಷಗಳಾದಾಗ ನಿಧಾನವಾಗಿ ಕಾವ್ಯಪ್ರಪಂಚದ ಹೊಸ್ತಿಲಲ್ಲಿ ನನ್ನನ್ನು ತಂದು ನಿಲ್ಲಿಸಿದ್ದೂ ನಮ್ಮಜ್ಜನೇ. ಲೇಖನ ಕಲೆ, ಕವನದ ಲಯಬದ್ಧತೆ, ಗೇಯತೆ, ಹದವರಿತು ಪ್ರಾಸವನ್ನು ಬಳಸುವ ಬಗೆ...ಇತ್ಯಾದಿ ವಿಷಯಗಳ ಬಗ್ಗೆ ಅವರು ನನಗೆ ಅಂದು ಇತ್ತ ಮಾರ್ಗದರ್ಶನ ಇಂದು ಹೆಚ್ಚು ಹೆಚ್ಚು ಉಪಯೋಗಕ್ಕೆ ಬರುತ್ತಿದೆ!
ಬಾಲ್ಯದಿಂದಲೂ ನನ್ನನ್ನು ಅಕ್ಷರಶಃ ತಿದ್ದಿ-ತೀಡಿ ಬೆಳೆಸಿದ್ದು ನಮ್ಮಪ್ಪ. ಅಪ್ಪ ತಮ್ಮ ವೃತ್ತಿಯ ಬಹುತೇಕ ಭಾಗವನ್ನು ನಮ್ಮೂರಿನ (ನನ್ನೂರು ಚಿಕ್ಕಮಗಳೂರು ಜಿಲ್ಲೆಯ ಬೀರೂರು) ಸರ್ಕಾರೀ ಹೈಸ್ಕೂಲಿನಲ್ಲಿ ಉಪಾಧ್ಯಾಯ ಮತ್ತು ಮುಖ್ಯೋಪಾಧ್ಯಾಯರಾಗಿ ಕಳೆದರು. ಶಿಸ್ತಿನ ಸಿಪಾಯಿಯಾಗಿ, "ಬಿ.ಸಿ.ಡಿ." ಅಂತಲೇ ಚಿರಪರಿಚಿತರಾಗಿದ್ದ ಅಪ್ಪ ಜಿಲ್ಲೆಯಲ್ಲೇ ಹೆಸರುವಾಸಿ ಶಿಕ್ಷಕರಾಗಿದ್ದರು. ನನ್ನ ಕೈಬರಹವನ್ನು ತಿದ್ದುವುದರಿಂದ ಹಿಡಿದು, ಚಿತ್ರ ಬಿಡಿಸುವುದು, ವಿಜ್ಞಾನಕ್ಕೆ ಸಂಬಂಧಿಸಿದ ಪ್ರಯೋಗಗಳನ್ನು ಮಾಡುವುದು, ಪುಸ್ತಕ ಓದುವ ಹುಚ್ಚು... ಹೀಗೆ ನನ್ನ ಬಹುತೇಕ ಚಟುವಟಿಕೆಗಳಿಗೆ ಸ್ಫೂರ್ತಿಯಾಗಿದ್ದವರು ಮತ್ತು ಗುರುವಾಗಿದ್ದವರು ಅಪ್ಪ. ಈಗಲೂ ಅವರನ್ನು ಬರಿಯ ಅಪ್ಪ ಎನ್ನುವುದಕ್ಕಿಂತ ಹೆಚ್ಚಾಗಿ ಒಬ್ಬ "ಗುರು, ಮಾರ್ಗದರ್ಶಿ ಮತ್ತು ಫಿಲೊಸೊಫರ್" ಆಗಿ ನೆನೆಯಲು ಇಷ್ಟಪಡುತ್ತೀನಿ.
ಶಿವಮೊಗ್ಗದ ಡಿ.ವಿ.ಎಸ್.ಜೂನಿಯರ್ ಕಾಲೇಜಿನಲ್ಲಿ ನಮಗೆ ಪಾರ್ಥಸಾರಥಿ ಅನ್ನುವ ಉಪನ್ಯಾಸಕರು ಭೌತಶಾಸ್ತ್ರ(ಫಿಸಿಕ್ಸ್) ತೆಗೆದುಕೊಳ್ಳುತ್ತಿದ್ದರು. ಅದೆಷ್ಟು ಚೆನ್ನಾಗಿ ಪಾಠ ಮಾಡುತ್ತಾ ಇದ್ದರು ಅಂದರೆ ಅವರು ಪಾಠ ಮಾಡುತ್ತಿದ್ದಾರೋ, ಕಥೆ ಹೇಳುತ್ತಿದ್ದಾರೋ ಗೊತ್ತಾಗುತ್ತಿರಲಿಲ್ಲ. "ನೋಡ್ರಯ್ಯ, ಫಿಸಿಕ್ಸ್ ಅಂತಲ್ಲ, ಯಾವುದೇ ವಿಷಯಾನೂ ಓದೋ ಖುಷಿಗಾಗಿ ಓದಬೇಕು. ಎಕ್ಸಾಮ್ಸ್ ದೃಷ್ಟಿಯಿಂದಲ್ಲ" ಅಂತ ಅವರು ಪದೇ ಪದೇ ಹೇಳುತ್ತಿದ್ದರು. ಅದಕ್ಕೇ ಅವರಿಗೆ ಎರಡನೇ ಪಿ.ಯು.ಸಿ.ಗೆ ಪಾಠ ಮಾಡೋದಕ್ಕಿಂತ ಮೊದಲನೇ ಪಿ.ಯು.ಸಿ.ಗೆ "ಸಿಲಬಸ್ ಪೂರ್ತಿ ಮಾಡುವ" ಹಂಗಿಲ್ಲದೆ ಪಾಠ ಮಾಡೋದು ಹೆಚ್ಚು ಪ್ರಿಯವಾಗಿತ್ತು! ನಾವು ಐದಾರು ಜನ ವಿದ್ಯಾರ್ಥಿಗಳು "ಸಿಲಬಸ್"ನಿಂದ ಹೊರಗಿನ ಪಾಠ ಕೇಳಲು ತಯಾರಾಗಿದ್ದು ಅವರಿಗೆ ಅದೆಂಥಾ ಖುಷಿ ಕೊಟ್ಟಿತ್ತು ಅಂದರೆ, ನಮಗಾಗಿ ಪ್ರತಿ ಭಾನುವಾರ 3-4 ಘಂಟೆ ಸುಮ್ಮನೆ ವಿಶೇಷ ತರಗತಿ ತೆಗೆದುಕೊಳ್ಳುತ್ತಿದ್ದರು. ಒಂದು ದಿನ ಅರ್ಧ ಘಂಟೆ ನೀಲ್ ಬೋರ್ ಅನ್ನುವ ವಿಜ್ಞಾನಿಯ ಸಾಧನೆ ಕುರಿತು ಕಥೆ ಹೇಳ್ತಾ ಹೇಳ್ತಾ ಅದೆಷ್ಟು ಚೆನ್ನಾಗಿ ಪಾಠ ಮಾಡಿದ್ರೂ ಅಂದ್ರೆ, ನನಗೆ ಈಗಲೂ ಅದರ ಪ್ರತಿ ಪದವೂ ಜ್ಞಾಪಕದಲ್ಲಿದೆ.
ಇದೇ ಡಿ.ವಿ.ಎಸ್. ಕಾಲೇಜಿನಲ್ಲಿದ್ದಾಗಲೇ ನನಗೆ ದೊರೆತ ಇನ್ನೊಬ್ಬ ನೆನಪಿನಲ್ಲುಳಿಯುವ ಉಪನ್ಯಾಸಕರು ಅಂದರೆ ಎಂ.ಆರ್.ಸೀತಾಲಕ್ಷ್ಮಿ (ಎಂ.ಆರ್.ಎಸ್.). ಇವರು ನಮಗೆ ಗಣಿತ ಪಾಠ ಮಾಡುತ್ತಿದ್ದರು. ಪಾಠ ಮಾಡುವ ಕಲೆ ಅದೆಷ್ಟು ಕರಗತವಾಗಿತ್ತು ಅಂದರೆ, ಅವರು ತರಗತಿಗೆ ಪುಸ್ತಕ ತಂದು ಪಾಠ ಮಾಡಿದ್ದು ನನಗಂತೂ ನೆನಪಿಲ್ಲ. ಎಂ.ಆರ್.ಎಸ್.ಗೆ ಅಧ್ಯಾಪನ ಅನ್ನೋದು ಕೇವಲ ವೃತ್ತಿಯಾಗಿರಲಿಲ್ಲ, ಅದೊಂದು ಪ್ರಾಣಪ್ರಿಯ ಹವ್ಯಾಸ! ಓದುವವರನ್ನು ಕಂಡರೆ ಅದೇನು ಇಷ್ಟ ಅಂತೀರಾ. ಅವರು ವಿದ್ಯಾರ್ಥಿಗಳನ್ನು ಮಾತಾಡಿಸುತ್ತಿದ್ದ ರೀತಿಯೂ ಅಷ್ಟೇ, "ಅಪ್ಪಾ, ಅಣ್ಣ, ಅಣ್ಣಯ್ಯಾ.." ಅಂತಲೇ! ಯಾರಾದರೂ ಓದುವುದರಲ್ಲಿ ಸ್ವಲ್ಪ ಹೆಚ್ಚು ಆಸಕ್ತಿ ತೋರಿಸಿದರಂತೂ, ಆ ಹುಡುಗನನ್ನೋ/ಹುಡುಗಿಯನ್ನೋ ಅವರು ಶಿವಮೊಗ್ಗೆಯ ಹತ್ತಿರದ ತಮ್ಮೂರಾದ ಮತ್ತೂರಿಗೇ ಕರೆದು, ತಮ್ಮ ಮನೆಯಲ್ಲಿ ಹೊತ್ತಿನ ಅರಿವಿಲ್ಲದೆ ಪಾಠ ಮಾಡಿದ ಉದಾಹರಣೆಗಳು ಲೆಕ್ಕವಿಲ್ಲದಷ್ಟು. ಎಮ್.ಆರ್.ಎಸ್. ತಮ್ಮ ತರಗತಿಗಳಲ್ಲಿ ಒಮ್ಮೊಮ್ಮೆ ಪಾಠ ಮಾಡುತ್ತಾ ಮಾಡುತ್ತಾ ಮೈಮರೆತು ಗಾಳಿಯಲ್ಲಿ ಬರೆದು (ಗಾಳಿಯಲ್ಲೇ ಬೋರ್ಡ್ ಇದೆ ಅನ್ನುವ ಭಾವನೆಯಿಂದ!) ವಿವರಿಸುತ್ತಿದ್ದದ್ದೂ, ಅದನ್ನು ಕಂಡು ನಾವೆಲ್ಲ ನಗುತ್ತಿದ್ದದ್ದೂ (ನಗು ಅಪಹಾಸ್ಯಕ್ಕಲ್ಲ) ನೆನಪಿದೆ.
ಎರಡನೇ ಪಿ.ಯು.ಸಿ.ಯಲ್ಲಿ ಓದುತ್ತಿದ್ದಾಗ ಪರಿಚಯವಾದ ಮೇಷ್ಟ್ರು ಬಿ.ಜಿ.ಶ್ರೀನಿವಾಸಮೂರ್ತಿ. ಇವರು ಬೆಂಗಳೂರಿನ ಜಯನಗರ, ಜೆ.ಪಿ.ನಗರ ಬಡಾವಣೆಗಳಲ್ಲಿ ಬಿ.ಜಿ.ಎಸ್. ಅಂತಲೇ ಖ್ಯಾತರಾಗಿದ್ದಾರೆ. ಇವರ ಹತ್ತಿರ ಗಣಿತ ಪಾಠ ಹೇಳಿಸಿಕೊಂಡು ನೂರಕ್ಕೆ ನೂರು ಅಂಕ ಗಳಿಸಿದ ವಿದ್ಯಾರ್ಥಿಗಳು ಅದೆಷ್ಟು ನೂರು ಜನ ಇದ್ದಾರೋ ಗೊತ್ತಿಲ್ಲ. ಅಂದು ಮೊದಲ್ಗೊಂಡ ನಮ್ಮ ಸಂಬಂಧ ಇಂದಿಗೂ ಹಾಗೆಯೇ ಸಾಗಿದೆ. ನಾನು ಬಿ.ಜಿ.ಎಸ್. ಹತ್ತಿರ ನೇರವಾಗಿ ಪಾಠ ಹೇಳಿಸಿಕೊಂಡಿಲ್ಲ. ಶಿವಮೊಗ್ಗೆಯಲ್ಲಿ ಓದುತ್ತಿದ್ದ ನಾನು ಮನೆಪಾಠಕ್ಕೆ (ಟ್ಯೂಶನ್) ಹೋಗುತ್ತಿರಲಿಲ್ಲ. ಹಾಗಾಗಿ ನನಗಿದ್ದ ಕೆಲವೊಂದು ಸಂದೇಹಗಳನ್ನು ಚರ್ಚಿಸೋದಕ್ಕೆ ಅಂತ ನಾನು ಬಿ.ಜಿ.ಎಸ್ ಬಳಿ ಹೋದೆ. ಒಂದು ರೀತಿಯಲ್ಲಿ ನಾನವರಿಗೆ ಬಾದರಾಯಣ ಸಂಬಂಧಿಯಾದರೂ, ಸಂಬಂಧಕ್ಕಿಂತ ಹೆಚ್ಚು "ಓದೋ ಹುಡುಗ" ಅಂತ ಅವರು ನನಗೆ ದಿನವೂ ಅವರ ಮನೆಯಲ್ಲಿ, ತಮ್ಮ ಅವಿಶ್ರಾಂತ ದಿನಚರಿಯ ನಡುವೆ ಕೂಡಾ ನನ್ನ ಜೊತೆ ಒಂದಷ್ಟು ಹೊತ್ತು ಕೂತು ಅನೌಪಚಾರಿಕ ರೀತಿಯಲ್ಲಿ ಪಾಠ ಹೇಳುತ್ತಿದ್ದರು. ಬರಿಯ ಪಾಠ ಅಷ್ಟೇ ಅಲ್ಲ ಜೊತೆಗಿಷ್ಟು ರುಚಿಕಟ್ಟಾದ ಊಟ-ತಿಂಡಿ ಕೂಡಾ! ನನ್ನ ಎರಡನೇ ಪಿ.ಯು. ಮುಗಿದು ಬಿ.ಇ. ಸೇರುವ ಹಂತದಲ್ಲಿ ಯಾವ ವಿಷಯ ಆರಿಸಿಕೊಳ್ಳಲಿ ಅಂತ ಸ್ವಲ್ಪ ಗೊಂದಲವುಂಟಾಗಿತ್ತು. ನನಗೆ ಕೆಮಿಸ್ಟ್ರಿ ತುಂಬಾ ಇಷ್ಟ. ಆದರೆ ಮುಂದೆ ಕೆಲಸದ ದೃಷ್ಟಿಯಿಂದ ಅದು ಅಂತಹ ಸೂಕ್ತ ಅಲ್ಲ ಅಂತ ಮನೆಯವರ ಭಾವನೆ. ನಾನು ಬಿ.ಜಿ.ಎಸ್. ಬಳಿ ಸಲಹೆ ಕೇಳಲು ಹೋದೆ. "ನೋಡಪ್ಪ, ಏನು ಓದಬೇಕು ಅಂತ ಆಸೆಯೋ ಅದನ್ನು ಓದು. ಆಮೇಲೆ ದುಡಿಯುವ ದಾರಿ ಗೊತ್ತಾಗಲಿಲ್ಲ ಅಂದರೆ ನನ್ನ ಹತ್ತಿರ ಬಾ, ತೋರಿಸುತ್ತೀನಿ" ಅಂತ ಹೇಳಿ ಸ್ಥೈರ್ಯ ಮತ್ತು ಉತ್ಸಾಹ ತುಂಬಿದರು! ಇಂತಹ ಗುರುಗಳನ್ನು ತಂಪು ಹೊತ್ತಿನಲ್ಲಿ ನೆನೆಯೋದು ನನ್ನ ಕರ್ತವ್ಯ ಅಂತ ಭಾವಿಸಿದ್ದೀನಿ.
ಪಿ.ಯು. ಮುಗಿದು ಇಂಜಿನಿಯರಿಂಗಿಗೆ ಅಂತ ನಾನು ಮೈಸೂರಿನ ಜಯಚಾಮರಾಜೇಂದ್ರ ಕಾಲೇಜು ಸೇರಿದೆ. ನಮಗೆ ಮೊದಲ ಸೆಮಿಸ್ಟರಿನಲ್ಲಿ "ಇಂಜಿನಿಯರಿಂಗ್ ಮೆಕಾನಿಕ್ಸ್" ತೆಗೆದುಕೊಳ್ಳೊದಕ್ಕೆ ಅಂತ ಬಂದಿದ್ದು ಪಿ.ನಂಜುಂಡಪ್ಪ ಅನ್ನುವ ತರುಣ ಲೆಕ್ಚರರ್. ಮೊದಲ ತರಗತಿಯಲ್ಲೇ ಅವರು "ನಾನು ಅಟೆಂಡೆನ್ಸ್ ಅಂತೆಲ್ಲ ನಿಮ್ಮನ್ನು ಗೋಳುಹುಯ್ಯೋದಿಲ್ಲ. ಯಾರಿಗೆ ಇಷ್ಟವೋ ಅವರು ಕೂತು ಪಾಠ ಕೇಳಿ, ಉಳಿದವರು ನಿರಾಳವಾಗಿ ತೊಂದರೆ ಕೊಡದೆ ಎದ್ದು ಹೋಗಿ. ಆದರೆ ಒಂದು ವಿಷಯ, ನನ್ನ ಪಾಠ ಕೇಳಿದ ಮೇಲೆ ಬಹುಶಃ ಮನೆಯಲ್ಲಿ ಓದುವ ಪ್ರಮೇಯ ಬರಲಾರದು" ಅಂದರು! ಎಲ್ಲರಿಗೂ ತಬ್ಬಿಬ್ಬು. ಆದರೆ ಆ ಮಾತುಗಳು ಕೇವಲ ಸ್ವಪ್ರಶಂಸೆಯಾಗಿರಲಿಲ್ಲ. ಅದಾಗಿ ಮೂರು ತಿಂಗಳಲ್ಲಿ ಪಿ.ಎನ್. ಎಲ್ಲಾ ವಿದ್ಯಾರ್ಥಿಗಳನ್ನೂ ಅದ್ಯಾವ ಪರಿ ಆವರಿಸಿಕೊಂಡರು ಅಂದರೆ, ನಮ್ಮ ಸೆಕ್ಷನ್ ಅಷ್ಟೇ ಅಲ್ಲ ಉಳಿದ ಸೆಕ್ಷನ್ನಿನವರೂ ಬಂದು ಅವರ ತರಗತಿಯಲ್ಲಿ ಕೂರುತ್ತಿದ್ದರು. ಅವರ ತರಗತಿಗಳಲ್ಲಿ ಕೆಲವೊಮ್ಮೆ ಕೂರಲು ಜಾಗ ಸಾಲದೆ ನಿಂತು ಪಾಠ ಕೇಳಿದ್ದೂ ಉಂಟು! ನಾನು ನಿಜವಾಗಿಯೂ "ಇಂಜಿನಿಯರಿಂಗ್ ಮೆಕಾನಿಕ್ಸ್"ನ್ನು ಮನೆಯಲ್ಲಿ ಎರಡನೇ ಬಾರಿ ಓದಲೇ ಇಲ್ಲ.
ನಮ್ಮ ಎರಡನೇ ಸೆಮಿಸ್ಟರಿನಲ್ಲಿ ಪಿ.ಎನ್. ನಮಗೆ ಯಾವುದೇ ತರಗತಿ ತೆಗೆದುಕೊಳ್ಳುತ್ತಿರಲಿಲ್ಲ. ಆದರೆ ಒಂದು ಸಬ್ಜೆಕ್ಟ್ ನಮಗೆ ಕಬ್ಬಿಣದ ಕಡಲೆಯಾಗಿತ್ತು. ಅದನ್ನು ಪಾಠ ಮಾಡುವ ಲೆಕ್ಚರರ್ ಚೂರೂ ಚೆನ್ನಾಗಿ ಮಾಡುತ್ತಿರಲಿಲ್ಲ. ನಮಗೇನೂ ಗೊತ್ತಿಲ್ಲ ಅಂತ ಗೊತ್ತಾಗುವ ಹೊತ್ತಿಗೆ ಕೇವಲ ಒಂದು ತಿಂಗಳಲ್ಲಿ ಫೈನಲ್ ಎಕ್ಸಾಮ್ಸ್ ಇತ್ತು. ಸರಿ, ಡುಂಕಿ ಖಚಿತ ಅಂತ ಎಲ್ಲರೊ ನಿರ್ಧಾರ ಮಾಡಿಯಾಗಿತ್ತು. ನಾವು ಏಳೆಂಟು ಜನ ಸ್ನೇಹಿತರು ಕೊನೆಯ ಪ್ರಯತ್ನವೆಂಬಂತೆ ಪಿ.ಎನ್. ಬಳಿಗೆ ಹೋಗಿ ಎಲ್ಲ ವರದಿ ಒಪ್ಪಿಸಿ ಗೋಣು ಕೆಳಗೆ ಹಾಕಿ ನಿಂತ್ವಿ. "ಮೊದಲೇ ಹೇಳೋಕೆ ಏನಾಗಿತ್ತು? ಎಕ್ಸಾಮ್ ಆದಮೇಲೆ ಕೇಳಿದ್ದಿದ್ದರೆ ಇನ್ನೂ ಚೆನ್ನಾಗಿರುತ್ತಿತ್ತು ಅಲ್ವಾ?" ಅಂತ ಪ್ರೀತಿಯಿಂದಲೇ ಬೈದ ಪಿ.ಎನ್. ಅವತ್ತಿನಿಂದ ಒಂದು ತಿಂಗಳು, ಪ್ರತಿದಿನ (ನೆನಪಿಡಿ, ಇದು ಅವರು ನಿಯಮದ ಪ್ರಕಾರ ಪಾಠ ಮಾಡಬೇಕಾಗಿಲ್ಲದ ವಿಷಯ) ಸಂಜೆ ನಮ್ಮ ತರಗತಿಗಳು ಮುಗಿಯುವ ಸಮಯಕ್ಕೆ ಸರಿಯಾಗಿ ಅವರ ಮನೆಯಿಂದ ಬಂದು, ಆಮೇಲೆ ಎರಡು ಘಂಟೆ ಪಾಠ ಮಾಡುತ್ತಿದ್ದರು. ಪರೀಕ್ಷೆಗಳೆಲ್ಲ ಮುಗಿದ ನಂತರ ಎಕ್ಸಾಮ್ ಚೆನ್ನಾಗಿ ಆಯಿತು ಅಂತ ಹೇಳೋದಕ್ಕೆ ಅವರ ಮನೆಗೆ ನಾವೆಲ್ಲ ಹೋದೆವು. ಸುಮ್ಮನಿರಲಾರದೆ ನಮ್ಮಲ್ಲಿ ಒಬ್ಬ "ಫೀಸ್" ಬಗ್ಗೆ ಕೇಳಿದ ನೋಡಿ; ಪಿ.ಎನ್ ಉಗಿದು ಉಪ್ಪಿನಕಾಯಿ ಹಾಕಿದ್ದು ಇನ್ನೂ ನೆನಪಿದೆ!
ಹೀಗೇ ಹೇಳುತ್ತಾ ಹೋದರೆ ಪಟ್ಟಿ ಬೆಳೆಯುತ್ತಾ ಹೋಗುತ್ತೆ ಬಿಡಿ. ಇನ್ನೂ ನಾಲ್ಕೈದು ಗುರುಗಳ ಬಗೆಗಿನ ನೆನಪುಗಳನ್ನು ಬರೆಯಬೇಕು ಅನ್ನೋ ಆಸೆಯೇನೋ ಇದೆ. ಪ್ರಾಥಮಿಕ ಶಾಲೆಯಲ್ಲಿ ಯಾವಾಗಲೂ ಗುಡ್ ಹಾಕಿ ಉತ್ತೇಜನ ನೀಡುತ್ತಿದ್ದ "ಗುಡ್ ಮಿಸ್", ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯಿನಿಯಾಗಿದ್ದ ಮಾರ್ಗರೆಟ್ ಮಿಸ್, ಹೈಸ್ಕೂಲಿನಲ್ಲಿ ಸಂಸ್ಕೃತ ಹೇಳಿಕೊಟ್ಟ ವಿದ್ವಾನ್.ಎಮ್.ಸುಬ್ರಹ್ಮಣ್ಯ ಭಟ್ಟರು, ಕಾಲೇಜಿನಲ್ಲಿ ಸಂಸ್ಕೃತ ಉಪನ್ಯಾಸಕರಾಗಿದ್ದ ಕಿಟ್ಟಿ ಸರ್, ಇತಿಹಾಸದಂತಹ ವಿಷಯವನ್ನು "ಹೀಗೂ ಪಾಠ ಮಾಡಬಹುದು" ಅಂತ ತೋರಿಸಿ, ಇತಿಹಾಸದ ಬಗ್ಗೆ ಅಪಾರ ಆಸಕ್ತಿ ಚಿಗುರಿಸಿದ ಎಸ್.ವಿ.ಗಂಗಾಧರಪ್ಪನವರು, ಹೈಸ್ಕೂಲಿನಲ್ಲಿ ಮುಖ್ಯೋಪಾಧ್ಯಾಯರಾಗಿ ಬಂದು ಕನ್ನಡ ಸಾಹಿತ್ಯದ ಬಗ್ಗೆ ಪ್ರೀತಿ ಹುಟ್ಟುವಂತೆ ಮಾಡಿದ ಪಿ.ನಿಂಗಪ್ಪನವರು...ಹೀಗೇ. ಆದರೆ ಸದ್ಯಕ್ಕೆ ಇಷ್ಟು ಸಾಕು ಅಂತ ಅನ್ನಿಸುತ್ತಿದೆ. ಇನ್ನು ಯಾವಾಗಲಾದರೂ ಸಮಯ ಸಿಕ್ಕಾಗ ಈ ಬಗ್ಗೆ ಹರಟೋಣ, ಆಯ್ತಾ?.
ನೀವು ನಮ್ಮ ಹಿಂದೂ ಸಂಪ್ರದಾಯದ ಮಂತ್ರಗಳನ್ನು ಗಮನಿಸಿದ್ದೀರಾ? ಎಲ್ಲಾ ಮಂತ್ರಗಳನ್ನೂ ನಾವು ಹೇಳಲು ಪ್ರಾರಂಭಿಸುವುದು "ಶ್ರೀ ಗುರುಭ್ಯೋ ನಮಃ, ಹರಿಃ ಓಂ.." ಅಂತ! ದಿನನಿತ್ಯದ ಗುರುವಂದನೆಗೆ ಎಂತಹ ಸೂಕ್ತ ವಿಧಾನ ಅಲ್ಲವೇ?
ಗೃಹಲಕ್ಷ್ಮಿಗೆ
ಎಲ್ಲರ ಭವಿಷ್ಯದ ಹೊಂಗನಸ ತುಂಬಿ ನಿನ್ನ ಕಣ್ಣಲ್ಲಿ,
ವಿಶ್ರಾಂತಿಯ ಹಂಗೂ ಇಲ್ಲದೆ ನೀ ಸತತ ಶ್ರಮಿಸುತ್ತಿರಲು
ಕರೆದು ಸುಮ್ಮನಾಗಲೇ ಬರಿಯ "ಹೆಂಡತಿ"ಯೆಂದು ನಿನ್ನ?
ಇಲ್ಲ, ನಿನಗೊಪ್ಪುವ ಹೆಸರು "ಗೃಹಲಕ್ಷ್ಮಿ" ಚಿನ್ನ!
ಹೊರಗಿನುದ್ಯೋಗಗಳಲ್ಲಿ ನಮಗುಂಟು ನೂರೆಂಟು ರಜೆ,
ಮನೆಗೆಲಸದಲ್ಲಿ ನೀ ಹಾಕಿದರೆ ರಜೆ, ಎಲ್ಲರಿಗದು ಸಜೆ!
ಎಲ್ಲರ ಯಶಸ್ಸಿನ ಹಿಂದೆ ಕಂಡೂ ಕಾಣದಂತೆ ನೀನಿರಲು
ಕರೆದು ಸುಮ್ಮನಾಗಲೇ ಬರಿಯ "ಹೆಂಡತಿ"ಯೆಂದು ನಿನ್ನ?
ಇಲ್ಲ, ನಿನಗೊಪ್ಪುವ ಹೆಸರು "ಗೃಹಲಕ್ಷ್ಮಿ" ಚಿನ್ನ!
ಬೆನ್ನೆಲುಬಾಗಿ ನಿಂತು ಏಳುಬೀಳುಗಳಲ್ಲಿ, ಕಾಳಜಿಯ ತೋರಿ,
ಮೆಚ್ಚುಗೆಯ ಮಾತು ಬಾರದಿದ್ದರೂ ಸಹಿಸಿ, ನಸುನಗೆಯ ಬೀರಿ,
ಮರೆತೆಲ್ಲ ಹತಾಶೆಗಳ, ಮತ್ತೊಂದು ನಾಳೆಗೆ ಸಿದ್ಧವಾಗುತ್ತಿರಲು
ಕರೆದು ಸುಮ್ಮನಾಗಲೇ ಬರಿಯ "ಹೆಂಡತಿ"ಯೆಂದು ನಿನ್ನ?
ಇಲ್ಲ, ನಿನಗೊಪ್ಪುವ ಹೆಸರು "ಗೃಹಲಕ್ಷ್ಮಿ" ಚಿನ್ನ!
ಗಂಡನದೋ, ಮಕ್ಕಳದೋ ಸುಂದರ ಭವಿಷ್ಯಕ್ಕೆ ಪಣತೊಟ್ಟು,
ನಿನ್ನ ಭವಿಷ್ಯವನು, ಆಸೆ-ಆಕಾಂಕ್ಷೆಗಳನು ಸಂಪೂರ್ಣ ಬದಿಗಿಟ್ಟು,
ವನಸುಮದ ಕಲ್ಪನೆಯ ಸಾಕಾರವೆಂಬಂತೆ ನೀ ಕಂಪ ಸೂಸಿರಲು
ಕರೆದು ಸುಮ್ಮನಾಗಲೇ ಬರಿಯ "ಹೆಂಡತಿ"ಯೆಂದು ನಿನ್ನ?
ಇಲ್ಲ, ನಿನಗೊಪ್ಪುವ ಹೆಸರು "ಗೃಹಲಕ್ಷ್ಮಿ" ಚಿನ್ನ!
(ಈ ಕವನ "ವಿಕ್ರಾಂತ ಕರ್ನಾಟಕ"ದ ೧೯ ಜನವರಿ ೨೦೦೭ ರ ಸಂಚಿಕೆಯಲ್ಲಿ ಪ್ರಕಟವಾಗಿದೆ)
ನಿಜಜೀವನದಲ್ಲಿ ಹಾಸ್ಯ: ಭೀಮ-ದುರ್ಯೋಧನರ ಕಾಳಗ ಮತ್ತು ಸಂಕೋಚ್ಯತೆ
ನಮ್ಮಜ್ಜ ಹೈಸ್ಕೂಲು ಉಪಾಧ್ಯಾಯರಾಗಿದ್ದಾಗ ನಡೆದ ಘಟನೆಯಂತೆ ಇದು. ಕನ್ನಡ ಪರೀಕ್ಷೆ. ಪ್ರಶ್ನೆಪತ್ರಿಕೆಯಲ್ಲಿ ಒಂದು ಪ್ರಶ್ನೆ - "ಭೀಮ ದುರ್ಯೋಧನರ ಕಾಳಗವನ್ನು ನಿಮ್ಮದೇ ಆದ ವಾಕ್ಯಗಳಲ್ಲಿ, ಒಂದು ಪುಟಕ್ಕೆ ಮೀರದಂತೆ ವಿವರಿಸಿ". ಬಹುಶಃ ರನ್ನನ "ಗದಾಯುದ್ಧ"ವನ್ನು ಮನಸ್ಸಿನಲ್ಲಿಟ್ಟುಕೊಂಡು ಈ ಪ್ರಶ್ನೆ ಹಾಕಿರಬೇಕು ಅನ್ನಿಸುತ್ತೆ. ಒಬ್ಬ ಭೂಪ ಉತ್ತರ ಬರೆದಿದ್ದು ಹೀಗೆ: "ಭೀಮ ತನ್ನ ಗದೆಯ ತುದಿಯಿಂದ ಮೊದಲು ದುರ್ಯೋಧನನ ಭುಜಕ್ಕೆ ತಿವಿದು, ನಂತರ ಗದೆಯನ್ನು ಸುತ್ತಿಸಿ ಸುತ್ತಿಸಿ ಹೊಡೆದು, ನಂತರ ದುರ್ಯೋಧನನ ಹೊಟ್ಟೆಗೆ ಬಲವಾಗಿ ಹೊಡೆದು, ಆಮೇಲೆ ದುರ್ಯೋಧನನ ತಲೆಯ ಮೇಲೆ ಅಪ್ಪಳಿಸಿ........" ಹೀಗೆ ಇಡಿಯ ಪುಟವನ್ನು ಬೇರೆ ಬೇರೆ ರೀತಿಯ "ತನ್ನದೇ ಆದ ತಿವಿತ, ಹೊಡೆತಗಳ ವಿವರಣೆಯಿಂದ" ತುಂಬಿಸಿ ಕೊನೆಯಲ್ಲಿ ".....ದುರ್ಯೋಧನನು ಪೂರ್ಣ ಸುಸ್ತಾಗಿ ಇನ್ನೇನು ಕೆಳಗೆ ಬೀಳುವಷ್ಟರಲ್ಲಿ ಭೀಮನು ಅವನ ತೊಡೆಗೆ ಗದೆಯಿಂದ ಬಲವಾಗಿ ಹೊಡೆದು ಅವನನ್ನು ಸೋಲಿಸಿದನು" ಅಂತ ಬರೆದಿದ್ದನಂತೆ! ಉತ್ತರ ಪರಿಶೀಲಿಸುತ್ತಿದ್ದ ನಮ್ಮಜ್ಜನಿಗೆ ನಗು ತಡೆಯಲು ಆಗಲೇ ಇಲ್ಲವಂತೆ.
ಎರಡನೆಯದು ನಮ್ಮಪ್ಪ ಉತ್ತರಪತ್ರಿಕೆ ಪರಿಶೀಲಿಸುವಾಗ ಅವರಿಗೆ ಕಂಡುಬಂದದ್ದು (ಸುಮಾರು ಇಪ್ಪತ್ತು ವರ್ಷಗಳ ಹಿಂದಿನ ಮಾತಿದು).ಪ್ರಶ್ನೆ ಏನಪ್ಪ ಅಂದ್ರೆ - "ಸಂಕೋಚ್ಯತೆ(compressibility) ಅಂದರೇನು? ಉದಾಹರಣೆ ಸಹಿತ ವಿವರಿಸಿ". ಭೌತಶಾಸ್ತ್ರದ ಪ್ರಶ್ನೆ.ಒಬ್ಬ ಬರೆದಿದ್ದ ಉತ್ತರ ಹೀಗಿತ್ತಂತೆ (ಉತ್ಪ್ರೇಕ್ಷೆ ಅಲ್ಲವೇ ಅಲ್ಲ, ಲಿಟರಲಿ ಹೀಗೇ ಬರೆದಿದ್ದನಂತೆ): "ನೀವು ಹೊಸದಾಗಿ ಒಂದು ಊರಿಗೆ ಹೋಗುತ್ತೀರ ಅಂತ ಇಟ್ಟುಕೊಳ್ಳಿ. ಕುಡಿಯುವ ನೀರು ಹಿಡಿಯಲು ನಲ್ಲಿಯೊಂದರ ಬಳಿ ಹೋಗಬೇಕಾಗುತ್ತದೆ ಅಂತ ಭಾವಿಸಿ. ನಲ್ಲಿಯ ಬಳಿ ಬಹುತೇಕ ಹೆಣ್ಣುಮಕ್ಕಳೇ ಇದ್ದಾರೆಂದುಕೊಂಡರೆ, ಆಗ ನಿಮಗೆ ಒಂದು ತರಹದ ಸಂಕೋಚ ಆಗುತ್ತಲ್ಲ, ಅದನ್ನೇ ಸಂಕೋಚ್ಯತೆ ಎನ್ನುತ್ತಾರೆ"!!!
ನನಸಾಗುವುದಿಲ್ಲ ಏಕೀ ಕನಸುಗಳು?
ಬದುಕೆಂದರೆ ಶುಭ್ರ, ವಿಶಾಲ, ತಿಳಿನೀಲಿ ಬಾಂದಳದಂತೆ,
ಗರಿಗೆದರಿ ಮನದುಂಬಿ ಹಾರಾಡಬಹುದಾದ ಆಂಗಣದಂತೆ,
ಬದುಕೆಂದರೆ ಅನಂತ, ನಿಗೂಢ, ತಾರೆಗಳ ತೋಟದಂತೆ.
ಏನೆಲ್ಲ ಕನಸುಗಳು ಬಾಲ್ಯದಲ್ಲಿ, ಎಳೆಯ ಮನದಲ್ಲಿ;
ವಿಜ್ಞಾನಿಯಾಗಿ ಹೊಸತೇನನ್ನೋ ಕಂಡುಹಿಡಿದಂತೆ,
ಗಗನಯಾತ್ರಿಯಾಗಿ ತಿಂಗಳನ ಅಂಗಳದಿ ನಡೆದಾಡಿದಂತೆ,
ಹಿಮಕವಿದ ಉನ್ನತ ಗಿರಿ-ಶಿಖರಗಳನ್ನು ಮೆಟ್ಟಿ ನಿಂತಂತೆ!
ಏನೆಲ್ಲ ತುಡಿತಗಳು ಬಾಲ್ಯದಲ್ಲಿ, ಎಳೆಯ ಮನದಲ್ಲಿ;
ಹತ್ತು ಮಂದಿಗೆ ಪಾಠ ಕಲಿಸುವ ಗುರುವು ನಾವಾದಂತೆ,
ಚಿತ್ರಕಾರನಾಗಿ ಹೊಸ ಬಣ್ಣಗಳಲಿ ಜಗವ ತೋಯಿಸಿದಂತೆ,
ವೈದ್ಯನಾಗಿ ಜನರ ಸೇವೆಯಲ್ಲಿಯೇ ಧನ್ಯತೆಯ ಪಡೆದಂತೆ!
ಏನೆಲ್ಲ ಆದರ್ಶಗಳು ಬಾಲ್ಯದಲ್ಲಿ, ಎಳೆಯ ಮನದಲ್ಲಿ;
ನವಭಾರತ ನಿರ್ಮಾಣವೆಂಬ ಯಜ್ಞದಲ್ಲಿ ಭಾಗಿಗಳಾದಂತೆ,
ಗಾಂಧಿ, ಸುಭಾಷರ ಧ್ಯೇಯಗಳಿಗೆ ಮರುಜೀವವಿತ್ತಂತೆ,
ನಮ್ಮ ಸಾಧನೆಯ ಚೆಂಬೆಳಕಲ್ಲಿ ಸಮಾಜವನ್ನು ಬೆಳಗಿದಂತೆ.
ನಾವು ಬೆಳೆದಂತೆ ನಮ್ಮ ಕನಸುಗಳ ರಾಶಿ ಕರಗುವುದು ಏಕೆ?
ಯಾಂತ್ರಿಕ ಬಾಳಬಂಡಿಯೋಟವೇ ಕೇಂದ್ರವಾಗುವುದು ಏಕೆ?
ಇಷ್ಟೆಲ್ಲ ತುಡಿತಗಳು, ಕನಸುಗಳು, ನನಸಾಗುವುದಿಲ್ಲವೇಕೆ?
ನಮ್ಮ ಕನಸುಗಳ ಸ್ಫೂರ್ತಿ ಸೆಲೆಯೇ ಬತ್ತಿ ಹೋಗುವುದೇಕೆ?
ಬೆಳ್ಳಿತೆರೆಯ ಬಂಗಾರದ ಮನುಷ್ಯನಿಗೊಂದು ನುಡಿನಮನ
ಅಣ್ಣಾವ್ರೇ, ಇಂದು ನಮ್ಮೊಂದಿಗಿಲ್ಲ ನೀವು ಎಂದರೆ ನಂಬಲಾಗುತ್ತಿಲ್ಲ
ನಿಮ್ಮ ಪಾತ್ರಗಳ ಗುಂಗಿನಿಂದ ಹೊರಬರಲು ಏಕೋ ಸಾಧ್ಯವಾಗುತ್ತಿಲ್ಲ.
ಬೆಳ್ಳಿತೆರೆಯ "ಬಂಗಾರದ ಮನುಷ್ಯ" ನಿಮಗೆ ಅರ್ಪಣೆ ನನ್ನೀ ಕವನ;
ನೀವು ಕಟ್ಟಿಕೊಟ್ಟ ಬಣ್ಣ-ಬಣ್ಣದ ಕನಸುಗಳಿಗಿದು ನನ್ನ ನುಡಿ ನಮನ.
ಸಾಧು-ಸಂತರಿಗೆ, ಇತಿಹಾಸದ ರಾಜರಿಗೆ ಜೀವ ತುಂಬಿದಿರಿ ನೀವು;
ಕನಕನಾಗಿ ಬಾಗಿಲನು ತೆರೆಯೆಂದು ಬೇಡಿದಾಗ ತಳಮಳಿಸಿದ್ದು ನಾವು.
ಕಾಳಿದಾಸನ "ಮಾಣಿಕ್ಯ ವೀಣೆ"ಯನು ಬಣ್ಣಿಸಲು ಪದಗಳೇ ಸಿಗುತ್ತಿಲ್ಲ;
ರಣಧೀರ, ಕೃಷ್ಣದೇವರಾಯರಂತೂ ಸದಾ ಮನದಲ್ಲೇ ನೆಲಸಿರುವರಲ್ಲ!
ಮರೆಯಲಾದೀತೇ ಮಣ್ಣಿನ ಜೊತೆ ಮಗುವನ್ನೂ ತುಳಿದ ಕುಂಬಾರನನ್ನು?
ಮಯೂರನ ಕತ್ತಿವರಸೆಯನ್ನು, ಅರ್ಜುನ-ಬಭ್ರುವಾಹನರ ಕಾಳಗವನ್ನು?
ಪಾತ್ರದೊಳಗೊಂದಾಗುತ್ತಿದ್ದ ನಿಮ್ಮಭಿನಯದ ಉತ್ತುಂಗ ಆ "ಹರಿಶ್ಚಂದ್ರ",
ಕಿರೀಟವನ್ನಿಟ್ಟು ಅರಸನುಡುಗೆ ತೊಟ್ಟರಂತೂ ಸಾಕ್ಷಾತ್ ಧರೆಗಿಳಿದ ಇಂದ್ರ!
ಕನ್ನಡವೇ ನನ್ನ ಪ್ರಾಣವೆನ್ನುತ್ತಾ ನಾಡು-ನುಡಿಗಳಿಗಾಗಿ ಹೋರಾಡಿದಿರಿ,
ರಾಜಕೀಯಕ್ಕಿಳಿಯದೆಯೆ ಅಭಿಮಾನಿಗಳೆದೆಯೆಂಬ ರಾಜ್ಯವನು ಆಳಿದಿರಿ.
ಶಾಲೆ-ಆಸ್ಪತ್ರೆಗಳನ್ನೇಕೆ ಕಟ್ಟಿಸಲಿಲ್ಲ? ಎಂದು ಕೇಳಲು ಮನಸ್ಸೊಪ್ಪುತ್ತಿಲ್ಲ;
ಸಾಕು ಬಿಡಿ, ತಲೆಮಾರುಗಳೆರಡರಲ್ಲಿ ಕನ್ನಡದ ಕಿಚ್ಚು ಹೊತ್ತಿಸಿದಿರಲ್ಲ.
ಅಣ್ಣಾವ್ರೇ, ಸಾಕೆನ್ನಿಸಿತೇಕೆ "ರಾಜಕುಮಾರ"ನೆಂಬ ಈ ಅಮೋಘ ಪಾತ್ರ?
ಮರೆಯಾದರೇನು ನೀವು, ಮನದಲ್ಲಿ ನಿಮ್ಮ ಪಾತ್ರಗಳದ್ದೇ ನಿತ್ಯಚೈತ್ರ.
ಆ ದೇವರಿಗೂ ನೋಡಬೇಕೆನ್ನಿಸಿತೇನೋ ನಿಮ್ಮನ್ನು ಅವನ ಪಾತ್ರದಲ್ಲಿ!
ಪುನಃ ಬಂದುಬಿಡಿ ಬೇಗ, ತೆರವಾಗಿಹುದು ಸ್ಥಾನ ನಮ್ಮ ಹೃದಯಗಳಲ್ಲಿ.
(ಈ ಕವನ "ಸಂಪದ"ದಲ್ಲಿ ಪ್ರಕಟವಾಗಿದೆ)