Monday, March 12, 2007

ಬುದ್ಧ ಸ್ವೀಕರಿಸಲೊಪ್ಪದ ಉಡುಗೊರೆ!

ಒಮ್ಮೆ ಗೌತಮ ಬುದ್ಧನ ಬಳಿಗೆ ಅವನನ್ನು ತೀವ್ರವಾಗಿ ದ್ವೇಷಿಸುವ ವ್ಯಕ್ತಿಯೊಬ್ಬ ಬಂದನಂತೆ. ಬುದ್ಧನ ಸುತ್ತ ಅನೇಕ ಶಿಷ್ಯಂದಿರು ನೆರೆದಿದ್ದ ಸಮಯ. ಬಂದಾತ ಬುದ್ಧನೊಡನೆ ಚರ್ಚೆಗಿಳಿಯಲು ಬಯಸಿದ. ಬುದ್ಧ ಆತನ ಕೋರಿಕೆಯನ್ನು ಸಂತೋಷದಿಂದ ಸಮ್ಮತಿಸಿದ. ಪ್ರಾರಂಭದಲ್ಲಿ ನೇರವಾಗಿಯೇ ಸಾಗಿದ ಚರ್ಚೆ ಕ್ರಮೇಣ ಅಡ್ಡದಾರಿ ಹಿಡಿಯಿತಂತೆ. ಚರ್ಚೆಗಿಳಿದ ವ್ಯಕ್ತಿ ಬುದ್ಧನ ಬಗೆಗಿನ ವೈಯಕ್ತಿಕ ದ್ವೇಷವನ್ನು ತನ್ನ ಮಾತುಗಳಲ್ಲಿ ವ್ಯಕ್ತಪಡಿಸಲು ಆರಂಭಿಸಿದ. ಸುಳ್ಳು ಆರೋಪಗಳನ್ನು ಹೊರಿಸಿ ಬುದ್ಧನನ್ನು ನಿಂದಿಸಿದ. ಬುದ್ಧ ಮಾತ್ರ ಸ್ವಲ್ಪವೂ ಬೇಸರಗೊಳ್ಳದೇ ಶಾಂತನಾಗಿಯೇ ಕುಳಿತಿದ್ದ. ಅ ವ್ಯಕ್ತಿ ಕೊನೆಗೆ ಅವಾಚ್ಯ ಶಬ್ದಗಳಿಂದ ಬುದ್ಧನನ್ನು ನಿಂದಿಸಲು ಪ್ರಾರಂಭಿಸಿದ. ಇದನ್ನು ಸಹಿಸಲಾರದ ಬುದ್ಧನ ಶಿಷ್ಯಂದಿರು ಆತನನ್ನು ಬಲವಂತದಿಂದ ಹೊರದಬ್ಬಲು ಪ್ರಯತ್ನಿಸಿದಾಗ, ಬುದ್ಧ ನಸುನಗುತ್ತಲೇ ಅವರನ್ನು ತಡೆದ.

ಸುಮಾರು ಸಮಯ ಬುದ್ಧನನ್ನು ನಿಂದಿಸಿದ ಆ ವ್ಯಕ್ತಿ ಕೊನೆಗೆ ತಾನಾಗಿಯೇ ಹೊರಟು ಹೋದನಂತೆ. ಬುದ್ಧ ಏನೂ ನಡೆದೇ ಇಲ್ಲವೆಂಬಂತೆ ನಗುತ್ತಾ ಕುಳಿತಿದ್ದ. ಆದರೆ ಈ ಘಟನೆಯಿಂದ ಬಹಳವಾಗಿ ನೊಂದ ಆನಂದನೆಂಬ ಆಪ್ತ ಶಿಷ್ಯ ಬುದ್ಧನನ್ನು ಕೇಳಿಯೇಬಿಟ್ಟ - "ಆತ ಸುಳ್ಳು ಆರೋಪಗಳನ್ನು ನಿಮ್ಮ ಮೇಲೆ ಹೊರಿಸಿ, ಅವಾಚ್ಯ ಶಬ್ದಗಳಿಂದ ನಿಮ್ಮನ್ನು ಅವಮಾನಿಸಿದರೂ ನೀವು ಸುಮ್ಮನೇ ಇದ್ದೀರಲ್ಲ, ಇದು ಸರಿಯೇ? ಆತನಿಗೆ ಸರಿಯಾಗಿ ಪ್ರತ್ಯುತ್ತರ ಕೊಡಬಾರದಿತ್ತೇ?".

ನಸುನಕ್ಕ ಬುದ್ಧ ಅಲ್ಲಿಯೇ ಇದ್ದ ಕಲ್ಲೊಂದನ್ನು ಕೊಡುವಂತೆ ಆನಂದನನ್ನು ಕೋರಿದ. ಆನಂದ ಆ ಕಲ್ಲನ್ನೆತ್ತಿ ಕೊಡಲು ಹೋದಾಗ ಬುದ್ಧ ಅದನ್ನು ತೆಗೆದುಕೊಳ್ಳಲು ನಿರಾಕರಿಸಿದ. "ಇದೇನು?" ಎಂಬಂತೆ ಆನಂದ ಯೋಚಿಸುತ್ತಾ ನಿಂತಾಗ ಬುದ್ಧ ಕೇಳಿದ - "ನೀನು ನನಗೆ ಕೊಡಲೆಂದು ಕಲ್ಲೊಂದನ್ನು ತಂದೆ. ಆದರೆ ನಾನದನ್ನು ತೆಗೆದುಕೊಳ್ಳಲಿಲ್ಲ. ಈಗ ಆ ಕಲ್ಲು ಯಾರ ಬಳಿಯಲ್ಲಿದೆ?". "ನನ್ನ ಹತ್ತಿರ" ಹೇಳಿದ ಆನಂದ. "ನೀನು ಕೊಡಲು ಬಂದ ಮಾತ್ರಕ್ಕೆ ಆ ವಸ್ತು ನನ್ನ ಬಳಿಸೇರಿತು ಎಂದು ಹೇಳಲಾಗುವುದಿಲ್ಲ! ನೀನು ಕೊಟ್ಟದ್ದನ್ನು ನಾನು ನಿರಾಕರಿಸಿದರೆ ಆ ವಸ್ತು ನಿನ್ನ ಬಳಿಯೇ ಉಳಿಯುತ್ತದೆ. ಹಾಗೆಯೇ ಆ ವ್ಯಕ್ತಿ ಕೊಡಲು ಬಂದ ಬಯ್ಗುಳಗಳನ್ನೂ ನಾನು ಸ್ವೀಕರಿಸಲಿಲ್ಲ. ಹಾಗಾಗಿ ಅವು ಆತನ ಬಳಿಯೇ ಉಳಿದಿವೆ! ಅದಕ್ಕೆ ಬದಲಾಗಿ ನಾನೂ ಪ್ರತಿಕ್ರಿಯಿಸಲು ಆರಂಭಿಸಿದ್ದಲ್ಲಿ ಆ ಬಯ್ಗುಳಗಳು ನನ್ನ ಮನಸ್ಸಿನಾಳಕ್ಕಿಳಿದು ನನ್ನ ಶಾಂತಿಯನ್ನೂ ಕದಡುತಿತ್ತೇ ವಿನಃ ಆತನಿಗೆ ಬುದ್ಧಿವಾದ ಹೇಳಿದಂತೆ ಆಗುತ್ತಿರಲಿಲ್ಲ. ಆತ ನನ್ನ ಶಾಂತಿಗೆ ಭಂಗವನ್ನುಂಟು ಮಾಡಲು ಪ್ರಯತ್ನಿಸಿದ. ಆದರೆ ನಾನದನ್ನು ನಿರಾಕರಿಸಿದೆ!" ಎಂದ ಬುದ್ಧ. "ನಮ್ಮ ಮನಸ್ಸಿನ ಶಾಂತಿ ನಮ್ಮನ್ನು ಅವಲಂಬಿಸಿರಬೇಕೇ ಹೊರತು ಹೊರಗಿನ ಪ್ರಚೋದನೆಯನ್ನಲ್ಲ" ಎಂದು ಬೋಧಿಸಿದ ಬುದ್ಧ.

(ಬರೆದದ್ದು: ೦೯-ಜನವರಿ-೨೦೦೭)

No comments: